ಸುಪ್ರೀಂ ಕೋರ್ಟ್ ಸಿಜೆಐ ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ ವಕೀಲ

News Desk

ಚಂದ್ರವಳ್ಳಿ ನ್ಯೂಸ್, ನವದೆಹಲಿ:
ನವದೆಹಲಿಯಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ವಿಚಾರಣೆ ನಡೆಯುತ್ತಿರುವಾಗ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಅವರ ಮೇಲೆ ತಮ್ಮ ಶೂ(ವಸ್ತು) ಎಸೆಯಲು ಪ್ರಯತ್ನಿಸಿದ ಘಟನೆ ಜರುಗಿದೆ.

ಸಿಜೆಐ ಮುಂದೆ ಪ್ರಕರಣಗಳ ಪ್ರಸ್ತಾಪದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯ ಪ್ರವೇಶಿಸಿ ವಕೀಲರನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ದಿದ್ದಾರೆ.
ಪೊಲೀಸರು ಅವರನ್ನು ಹೊರಗೆ ಕರೆದೊಯ್ಯುವಾಗ ವಕೀಲರು
ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ (ಸನಾತನ ಸಂಸ್ಥೆಗೆ ಯಾವುದೇ ಅವಮಾನವಾದರೆ ನಾವು ಸಹಿಸುವುದಿಲ್ಲ)ಎಂದು ಕೂಗಿದ್ದಾರೆ.

- Advertisement - 

ಇದಕ್ಕೆಲ್ಲ ಹೆದರುವುದಿಲ್ಲ:
ಆಕಸ್ಮಿಕ ಘಟನೆಯಿಂದ ವಿಚಲಿತರಾಗದ ಸುಪ್ರೀಂ ಕೋರ್ಟ್ ಸಿಜೆಐ ಗವಾಯಿ ಅವರು ಕೋರ್ಟ್​ನಲ್ಲಿ ಹಾಜರಿದ್ದ ವಕೀಲರಿಗೆ ದಿನದ ಕಲಾಪಗಳನ್ನು ಮುಂದುವರಿಸುವಂತೆ ಸೂಚಿಸಿದರು.

ಈ ಘಟನೆಯಿಂದ ವಿಚಲಿತರಾಗಬೇಡಿ. ನಾವು ಇದಕ್ಕೆಲ್ಲ ವಿಚಲಿತರಾಗುವುದಿಲ್ಲ. ಇಂತಹ ಘಟನೆಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಹೇಳಿದರು. ಸಿಜೆಐ ಅವರಿಗೆ ಮುಜುಗರ ಉಂಟು ಮಾಡಿದ್ದ ವಕೀಲರನ್ನು ರಾಕೇಶ್ ಕಿಶೋರ್ ಎಂದು ಗುರುತಿಸಲಾಗಿದೆ.

- Advertisement - 

ವಿಷ್ಣು ವಿಗ್ರಹದ ಕುರಿತಾದ ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ಗವಾಯಿ ನೀಡಿದ್ದ ಹೇಳಿಕೆಯನ್ನು ಉದ್ದೇಶಿಸಿ ಆ ವಕೀಲ ಈ ರೀತಿಯಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.

ಈ ಪ್ರಸಂಗದಿಂದಾಗಿ ಕೋರ್ಟ್​ನಲ್ಲಿ ಕೆಲಕಾಲ ಗದ್ದಲ ಉಂಟಾಗಿತ್ತು. ಆದರೆ ಸಿಜೆಐ ಅವರು ವಿಚಲಿತರಾಗದೆ, ಶಾಂತ ರೀತಿಯಿಂದ ವರ್ತಿಸಿದರು. ಜೊತೆಗೆ ಕಲಾಪ ಮುಂದುವರಿಸುಂತೆ ಅಲ್ಲಿದ್ದ ವಕೀಲರಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ವಿಷ್ಣು ವಿಗ್ರಹದ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದ ಹೇಳಿಕೆಗಳಿಗೆ ಸಂಬಂಧಿಸಿದಂತೆ ಟೀಕೆಗಳು ವ್ಯಕ್ತವಾದ ಬಳಿಕ ಸಿಜೆಐ ಅವರು ಎಲ್ಲಾ ಧರ್ಮಗಳನ್ನು ಗೌರವಿಸುವುದಾಗಿ ತಿಳಿಸಿದ್ದರು.

ಮಧ್ಯಪ್ರದೇಶದ ಯುನೆಸ್ಕೋ ವಿಶ್ವ ಪರಂಪರೆಯ ಖಜುರಾಹೊ ದೇವಾಲಯ ಸಂಕೀರ್ಣದಲ್ಲಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ವಿಗ್ರಹವನ್ನು ಪುನರ್ ನಿರ್ಮಿಸಲು ಮತ್ತು ಮರುಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಿಜೆಐ ನೇತೃತ್ವದ ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರ ನೇತೃತ್ವದ ಪೀಠವು ಸೆಪ್ಟೆಂಬರ್‌ನಲ್ಲಿ ವಜಾಗೊಳಿಸಿತ್ತು. ರಾಕೇಶ್ ದಲಾಲ್ ಎಂಬುವರು ಈ ಅರ್ಜಿಯನ್ನು ಸಲ್ಲಿಸಿದ್ದರು.

ಮಧ್ಯಪ್ರದೇಶದ ಖಜುರಾಹೊ ಸ್ಮಾರಕಗಳ ಸಮುಚ್ಛಯದಲ್ಲಿರುವ ಜವಾರಿ ದೇವಾಲಯದಲ್ಲಿ ಏಳು ಅಡಿ ಎತ್ತರದ ವಿಷ್ಣುವಿನ ಶಿರಚ್ಛೇದಿತ ವಿಗ್ರಹವನ್ನು ಪುನಃಸ್ಥಾಪಿಸಲು ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಮೊಘಲ್ ಆಕ್ರಮಣದ ಸಮಯದಲ್ಲಿ ಈ ವಿಗ್ರಹವನ್ನು ವಿರೂಪಗೊಳಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸರಿಪಡಿಸಿಲ್ಲ ಎಂದು ಅರ್ಜಿದಾರರು ವಾದಿಸಿದ್ದರು.

ಈ ಅರ್ಜಿಯನ್ನು ಸಿಜೆಐ ನೇತೃತ್ವದ ಪೀಠ ವಜಾಗೊಳಿಸಿತ್ತು. ಜೊತೆಗೆ ಈ ವೇಳೆ ಸಿಜೆಐ ನೀಡಿದ್ದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದವು.

ಇದು ಗಂಭೀರವಾದ ವಿಷಯ, ಪ್ರತಿ ಕ್ರಿಯೆಗೂ ಸಮಾನ ಪ್ರತಿಕ್ರಿಯೆ ಇರುತ್ತದೆ ಎಂಬ ನ್ಯೂಟನ್ ನಿಯಮ ನಮಗೆ ತಿಳಿದಿದೆ. ಆದರೆ ಈಗ ಪ್ರತಿ ಕ್ರಿಯೆಗೂ ಸಾಮಾಜಿಕ ಮಾಧ್ಯಮಗಳಲ್ಲಿ ಅಸಮಾನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತವೆ. ಸಿಜೆಐ ಎಲ್ಲಾ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದ್ದರು.

ಈ ಪ್ರಕರಣವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ವ್ಯಾಪ್ತಿಗೆ ಬರುತ್ತದೆಯೇ ಹೊರತು ನ್ಯಾಯಾಲಯದ ವ್ಯಾಪ್ತಿಗೆ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠ ತಿಳಿಸಿತ್ತು.

 

Share This Article
error: Content is protected !!
";