ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸತತ ಮೂರನೇ ದಿನವೂ ಶಾಸಕರ ಜೊತೆ ಒನ್ ಟು ಒನ್ ಮೀಟಿಂಗ್ ನಡೆಸಿದರು. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆಸಿದ ಸಭೆಯಲ್ಲಿ ಶಾಸಕರ ಅಹವಾಲುಗಳನ್ನು ಸುರ್ಜೇವಾಲಾ ಆಲಿಸಿದರು.
ಚಳ್ಳಕೆರೆ ವಿಧಾನಸಭಾ ಶಾಸಕ ಟಿ.ರಘುಮೂರ್ತಿ ಸೇರಿದಂತೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ್ ಜೊತೆ ಚರ್ಚೆ ನಡೆಸಿದ್ದು, ಸಿಎಂ ಅನುದಾನ ಕೊಡುತ್ತಿದ್ದಾರೆ. ಆದರೆ, ಗ್ಯಾರಂಟಿಗಳಿಂದ ಅನುದಾನ ಸ್ವಲ್ಪ ಮಟ್ಟಿಗೆ ಕೊರತೆ ಇದೆ. ಆದರೂ ಅಸಮಾಧಾನವಿಲ್ಲ. ಹೆಚ್ಚಿನ ಅನುದಾನ ಕೊಡಿಸಿದರೆ ಉತ್ತಮ. ಕೆಲವು ಪೆಂಡಿಂಗ್ ಕೆಲಸಗಳು ಇವೆ. ಅವುಗಳಿಗೆ ಮಂಜೂರಾತಿ ಕೊಡಬೇಕು. ಆರ್ಥಿಕ ಇಲಾಖೆ ಅನುಮತಿ ಕೊಡುತ್ತಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ಅದನ್ನು ಸರಿಪಡಿಸುವ ಭರವಸೆ ಕೊಟ್ಟಿದ್ದಾರೆ ಎಂದು ಸುರ್ಜೇವಾಲಾ ಮುಂದೆ ಬಣಕಾರ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎನ್ನಲಾಗಿದೆ.
ಸುರ್ಜೇವಾಲಾ ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆ ಯು.ಬಿ. ಬಣಕಾರ್ ಮಾತನಾಡಿ, ಶಾಸಕರ ಭಾವನೆ ತಿಳಿಯಲು ಅವಕಾಶ ನೀಡಲಾಗಿದೆ. ಕ್ಷೇತ್ರದ ಸಮಸ್ಯೆಗಳನ್ನು ಗಮನಕ್ಕೆ ತಂದಿದ್ದೇವೆ. ರಾಜಕೀಯ ಬೆಳವಣಿಗೆಳು, ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಪ್ರಭಾವ ಎಷ್ಟು ಮಟ್ಟಿಗೆ ಆಗಿದೆ. ಇದರ ಬಗ್ಗೆ ಕೇಳಿದ್ರು, ನಾವು ಹೇಳಿದ್ದೇವೆ. ಜನ ಇದನ್ನು ನೆನೆಯುತ್ತಿದ್ದಾರೆ. ಅನುದಾನದ ಕೊರತೆ ನಮಗೆ ಇಲ್ಲ. ಸಿಎಂ 50 ಕೋಟಿ ರೂ. ಅನುದಾನ ಕೊಡುತ್ತಿದ್ದಾರೆ. ನೀರಾವರಿಗೆ ಡಿಸಿಎಂ 50 ಕೋಟಿ ರೂ. ಕೊಟ್ಟಿದ್ದಾರೆ. ಹಾಗಾಗಿ ನಮ್ಮ ಕ್ಷೇತ್ರಕ್ಕೆ ಯಾವ ಸಮಸ್ಯೆ ಇಲ್ಲ. ಸಿಎಂ ಬದಲಾವಣೆ ವಿಚಾರ ಚರ್ಚೆಯಾಗಿಲ್ಲ. ಶಾಸಕರಿಂದ ಮಾಹಿತಿ ಸಂಗ್ರಹ ಮಾಡುವುದೂ ಇಲ್ಲ ಎಂದು ಶಾಸಕರು ತಿಳಿಸಿದರು.
ಮತ್ತೊಬ್ಬ ಶಾಸಕ ಪ್ರಕಾಶ್ ಕೋಳಿವಾಡ ಜೊತೆ ಸುರ್ಜೇವಾಲಾ ಚರ್ಚೆ ನಡೆಸಿದ್ದಾರೆ. ಸುರ್ಜೇವಾಲಾ ಮುಂದೆ ಕೋಳಿವಾಡ ಕೆಲ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಉತ್ತಮ ಸರ್ಕಾರ ನೀಡುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಜನ ನೆನೆಸುತ್ತಿದ್ದಾರೆ. ಗ್ಯಾರಂಟಿ ಸೌಲಭ್ಯಗಳನ್ನ ಮನೆ ಮನೆಗೆ ತಲುಪಿಸಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಕೂಡ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಶಾಸಕರು ತಿಳಿಸಿದರು.
ಅನುದಾನದ ಬಗ್ಗೆ ಸ್ವಲ್ಪ ಸಮಸ್ಯೆ ಇರುವುದು ನಿಜ. ಆದರೂ ಸರ್ಕಾರದ ಮೇಲೆ ಜನರಿಗೆ ನಂಬಿಕೆ ಬಂದಿದೆ. ಸಿಎಂ ಅನುದಾನ ಕೊಡುತ್ತೇವೆ ಅಂದಿದ್ದಾರೆ. ಕೆಲವು ಯೋಜನೆಗಳನ್ನೂ ಕೊಟ್ಟಿದ್ದಾರೆ. ಒನ್ ಟು ಒನ್ ಸಭೆ ನಡೆಸುತ್ತಿರುವುದು ಉತ್ತಮ. ಇದೇ ರೀತಿ ಮುಂದೆಯೂ ಸಭೆ ಮಾಡಿ. ನಮ್ಮ ಸಮಸ್ಯೆ ಹೇಳಿಕೊಳ್ಳುವುದಕ್ಕೆ ಅವಕಾಶ ಸಿಗುತ್ತದೆ ಎಂದು ಪ್ರಕಾಶ್ ಕೋಳಿವಾಡ ಅಭಿಪ್ರಾಯ ತಿಳಿಸಿದ್ದಾರೆ.
ಸಿಎಂ ಬದಲಾವಣೆ ವಿಚಾರದಲ್ಲಿ ಸ್ಪಷ್ಟನೆ ಬೇಕು. ಪದೇ ಪದೇ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇದು ತಳಮಟ್ಟದ ಕಾರ್ಯಕರ್ತರಿಗೆ ಗೊಂದಲ ಮೂಡಿಸುತ್ತದೆ. ಒಂದಿಬ್ಬರು ಸಚಿವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳ ಮೂಲಕ ಅವರಿಗೆ ಸೂಚನೆ ಕೊಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಕಚೇರಿಗೆ ಶಾಸಕ ಸಿ.ಪಿ. ಯೋಗೇಶ್ವರ್ ಪುತ್ರಿ ನಿಶಾ ಆಗಮಿಸಿದ್ದು, ಸುರ್ಜೇವಾಲಾ ಭೇಟಿಗೆ ಕಾದು ಕುಳಿತ್ತಿದ್ದರು. ಆದರೆ ಸಮಯ ನೀಡಲಾಗಿಲ್ಲ. ಉಪ ಚುನಾವಣೆ ಸಂದರ್ಭದಲ್ಲಿ ಯೋಗೇಶ್ವರ್ ವಿರುದ್ಧ ನಿಶಾ ಬೇಸರ ಹೊರಹಾಕಿದ್ದರು. ಇದೀಗ ಸುರ್ಜೇವಾಲಾ ಭೇಟಿಗೆ ನಿಶಾ ಆಗಮಿಸಿರುವುದು ಕುತೂಹಲ ಮೂಡಿಸಿದೆ.