ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪದೇ ಪದೇ ಅನಧಿಕೃತ ಗೈರು ಹಾಜರಿ ಹಾಗೂ ಕರ್ತವ್ಯ ನಿರ್ಲಕ್ಷತೆ ತೋರಿದ ಕಾರಣಕ್ಕಾಗಿ ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಟಿ.ಎನ್.ವಿನಯ್ ಕುಮಾರ್ ಹಾಗೂ ಹೊಸದುರ್ಗ  ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಗ್ರೇಡ್-2 ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎನ್.ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಆದೇಶಿಸಿದ್ದಾರೆ.

- Advertisement - 

      ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ದ್ವಿತೀಯ ದರ್ಜೆ ಸಹಾಯಕ ಟಿ.ಎನ್.ವಿನಯ್ ಕುಮಾರ್ ಅವರು ರಜೆಯ ಅರ್ಜಿಯನ್ನು ಸಲ್ಲಿಸದೇ ಮೇಲಾಧಿಕಾರಿಗಳ ಅನುಮತಿಯನ್ನು ಪಡೆಯದೇ ಕಚೇರಿಗೆ ಅನಧಿಕೃತವಾಗಿ ಗೈರು ಹಾಜರಾಗಿ ಕಚೇರಿಯ ದೈನಂದಿನ ಕೆಲಸ ಕಾರ್ಯಗಳಿಗೆ ಅಡಚಣೆಯನ್ನುಂಟು ಮಾಡಿರುತ್ತಾರೆ. ಹೀಗಾಗಿ ಇವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರದಿ ಸಲ್ಲಿಸಿರುತ್ತಾರೆ. ಇದರನ್ವ ದ್ವಿದಸ ಟಿ.ಎನ್.ವಿನಯ್ ಕುಮಾರ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.

- Advertisement - 

      ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು (ಗ್ರೇಡ್-2) ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಎನ್.ರಂಗಸ್ವಾಮಿ ಅವರು, ಹಲವು ಬಾರಿ ಕರ್ತವ್ಯಕ್ಕೆ ಮೇಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೇ ಗೈರು ಹಾಜರಾಗುತ್ತಿದ್ದು, ಈ ಕುರಿತು ಹಲವಾರು ಬಾರಿ ಕಾರಣ ಕೇಳಿ ನೋಟಿಸ್‍ಗಳನ್ನು ನೀಡಲಾಗಿದ್ದರೂ ಸಹ ಸಮಂಜಸವಾದ ಉತ್ತರ ನೀಡದೆ 2025ರ ಮೇ 14 ರಿಂದ ಜೂನ್ 10 ರವರೆಗೆ ಪೂರ್ವಾನುಮತಿ ಇಲ್ಲದೆ ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ.

ಹೀಗಾಗಿ ಇವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ವರದಿ ಸಲ್ಲಿಸಿರುತ್ತಾರೆ. ಇದರನ್ವಯ ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು (ಗ್ರೇಡ್-2) ಕಚೇರಿಯ ದ್ವಿದಸ ಎನ್.ರಂಗಸ್ವಾಮಿ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ, ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿದ್ದಾರೆ.      

- Advertisement - 

ಅಮಾನತು ಅವಧಿಯಲ್ಲಿ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರಸ್ಥಾನ ಬಿಡುವಂತಿಲ್ಲ ಮತ್ತು ಅನ್ಯ ಉದ್ಯೋಗದಲ್ಲಿ ತೊಡಗುವಂತಿಲ್ಲ ಹಾಗೂ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಿರುತ್ತಾರೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಸ್ತು ಪ್ರಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.

 

 

Share This Article
error: Content is protected !!
";