ಚಂದ್ರವಳ್ಳಿ ನ್ಯೂಸ್, ತುಮಕೂರು:
ರೈತನೊಬ್ಬನ ಜಮೀನಿನಲ್ಲಿ 19 ನವಿಲುಗಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಪ್ರಕರಣ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಮಿಡಿಗೇಶಿಯ ಬಳಿ ಜರುಗಿದೆ.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ರಾಷ್ಟ್ರ ಪಕ್ಷಿ ನವಿಲುಗಳ ಸಾವಿಗೆ ನಿಖಿರ ಕಾರಣವನ್ನು ಪತ್ತೆ ಮಾಡುವಂತೆ ತನಿಖಾಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕಟ್ಟುನಿಟ್ಟಿನ ಆದೇಶ ಮಾಡಿದ್ದಾರೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ – ಡಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಸಿ ಮುಂದಿನ 5 ದಿನಗಳೊಳಗೆ ಸೂಕ್ತ ವರದಿ ಸಲ್ಲಿಸಬೇಕೆಂದು ಸಚಿವರು ಆದೇಶದಲ್ಲಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿ ಕೀಟನಾಶಕ ಸೇವನೆಯಿಂದ ನವಿಲುಗಳ ಸಾವಿಗೆ ಕಾರಣವಾಗಿರಬಹುದೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ರಾಷ್ಟ್ರಪಕ್ಷಿ ನವಿಲುಗಳ ಸಾವಿಗೆ ಕಾರಣವಾಗಿರಬಹುದೆಂದು ಹೇಳಲಾಗಿರುವ ಈ ಕೀಟನಾಶಕವನ್ನು ನವಿಲುಗಳನ್ನು ಸಾಯಿಸಲೆಂದೇ ಹಾಕಲಾಗಿತ್ತೇ…?
ಅಥವಾ ಬೆಳೆಗಳಿಗೆ ಸಿಂಪಡಿಸಿದ ಕೀಟನಾಶಕಯುಕ್ತ ಫಸಲು ತಿಂದು ನವಿಲುಗಳು ಮೃತಪಟ್ಟಿವೆಯೇ? ಎಂಬ ಬಗ್ಗೆ ಡಿಸಿಎಫ್ ನೇತೃತ್ವದ ತಂಡದಿಂದ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ ಇಲಾಖೆ ಉನ್ನತಾಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಯಾವುದೇ ವನ್ಯಜೀವಿ ಮೃತಪಟ್ಟರೂ ಆಡಿಟ್ ಮಾಡಿಸಿ ತಕ್ಷಣವೇ ಸಚಿವರ ಕಾರ್ಯಾಲಯಕ್ಕೆ ಮಾಹಿತಿ ನೀಡುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆಯೂ ನಿರ್ದೇಶನ ನೀಡಿದ್ದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನುಮಾನಾಸ್ಪದ ಸಾವು:
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹನುಮಂತಪುರ ಗ್ರಾಮದ ರೈತರು ಬೆಳಗ್ಗೆ ತಮ್ಮ ಹೊಲಗದ್ದೆಗಳಿಗೆ ಹೋದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ನವಿಲುಗಳು ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣವೇ ಅವರು ನವಿಲುಗಳು ಸಾವನ್ನಪ್ಪಿರುವ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನವಿಲುಗಳ ಮೃತದೇಹವನ್ನು ಪ್ರಾಥಮಿಕ ಪರೀಕ್ಷೆಗಾಗಿ ಸ್ಥಳೀಯ ಪಶುಪಾಲನ ಇಲಾಖೆ ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದ್ದು ವೈದ್ಯಕೀಯ ವರದಿ ಬರಬೇಕಿದೆ.

