ಸಂಶಯ ಕಥೆ ಭಾಗ-3 ಕುಮಾರ್ ಬಡಪ್ಪ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸಂಶಯ ಕಥೆ ಭಾಗ-
3 ಕುಮಾರ್ ಬಡಪ್ಪ
ದಿನದಾಟ ಮುಗಿಸಿ ಮುಪ್ಪೇರಿಸಿಕೊಂಡ ಹೊತ್ತು
, ಸಂಜೆಯ ಕೆಂದೂಳು ಅಡರಿತ್ತು,ಹೊಲದ ಬದುಕಿನ ಜನ ಜಾನುವಾರುಗಳೆಲ್ಲ ಹಳ್ಳಿಕಡೆ ಮುಖ ಮಾಡಿದ್ವು, ತಿಪ್ಪಯ್ಯನೂ ಸಹ ಮನೆ ದಾರಿ ಹಿಡಿದಿದ್ದ. ಪ್ರತಿದಿನ ಗುಡಿಸಲ ಒಳ ಹೊರಗೆ ಕಸಗುಡಿಸುತ್ತಲೋ,ಇಲ್ಲ ನೀರು ಹಾಕುತ್ತಲೋ ಕಾಣಿಸಿಕೊಳ್ಳುತ್ತಿದ್ದ ಓಬವ್ವ, ಇವತ್ತು ತಿಪ್ಪಯ್ಯನ ಕಣ್ಣಿಗೆ ಬೀಳಲೇ ಇಲ್ಲ. ಆದ್ರೆ ಓಣಿ ಜನ ಮಾತ್ರ ವಿಶೇಷವಾಗಿ ನನ್ನನ್ನೇ ನೋಡ್ತಾ ಹೋಗುತ್ತಿದ್ದುದು ತಿಪ್ಪಯ್ಯನಿಗೂ ವಿಶೇಷವಾಗಿತ್ತು.

ಫರ್ಲಾಂಗು ದೂರದ ಸಾರಾಯಿ ಅಂಗಡಿ ಮುಂದೆ, ನಾಲ್ಕು ಜನಗಳ ಜೊತೆ ಗಾದ್ರಯ್ಯನೂ ಕುಳಿತು ದೊಡ್ಡ ದನಿಯಲ್ಲಿ ಕೂಗಿಕೊಳ್ಳುತ್ತಿದ್ದುದು ಅಸ್ಪಷ್ಟವಾಗಿ ಕಾಣುತ್ತಿತ್ತು.

- Advertisement - 

ನಾನು ಬರುವುದನ್ನೇ ಕಾದು ಕುಳಿತಿದ್ದು,ಕಾಣುತ್ತಲೇ ಸಣಪ್ಪಾ.. ಅಂತ ಹುಸಿನಗೆ ಬೀರಿ ಓಡೋಡಿ ಬರುತ್ತಿದ್ದ ಬೋಸನೂ ನಾಪತ್ತೆ ! ಏನೂ ತಿಳಿವಲ್ದು ? ಹುಡುಕಾಡುತ್ತಲೇ ತಿಪ್ಪಯ್ಯನ ಹೆಜ್ಜೆಗಳು ಮನೆ ಕಡೆ ಸರಿದಿದ್ದವು.

ಎಂದಿನ ಲವಲವಿಕೆ ಇಲ್ಲದೆ ಓಬವ್ವ ಮೌನಕ್ಕೆ ಶರಣಾಗಿದ್ದಳು. ಆದರೆ ಒಳ ಮನಸ್ಸು ಮಾತ್ರ ಗಾಳಿಗಿಟ್ಟ ದೀಪದಂತೆ ಉಯ್ಯಾಲೆಯಡುತ್ತಲೇ ಇತ್ತು. ಪಾಲಕ್ಕ ಹೇಳ್ದಂಗೆ ನಾನು ಅಂತವಳಾ ?

- Advertisement - 

ಬಲಗೈ,ಸೀರೆ ಸೆರಗನ್ನ ಹಿಡಿದು ಮುಖ ಒರೆಸುತ್ತಲೇ,ಬೇಡವೆಂದರೂ ಕಣ್ಣು ಮಾತ್ರ ನೀರಾಡುವುದನ್ನ ನಿಲ್ಲಿಸಿರಲಿಲ್ಲ.
ಗಂಡ ಬಾಗಿಲಿಗೆ ಬಂದು ಎರಡು ಮೂರು ಸಾರಿ ಕೂಗಿದ್ದು ಸಹ ಗಮನಕ್ಕೆ ಬಂದಿರಲಿಲ್ಲ
, ಒಮ್ಮೆ ತಿಪ್ಪಯ್ಯ ಜೋರಾಗಿ ಕೂಗಿದ, ಓಬಿ…  ಓಬೀ…. ಏನ್ ಮಾಡ್ತಿದಿಯೇ,

ಕಸ ಹೊಡೆದಿಲ್ಲ, ಬಾಗ್ಲಿಗೆ ನೀರೂ ಹಾಕಿಲ್ಲ ಏನೇ ಇದು ? ಏನಾಯ್ತು ನಿನಗೆ. ಗಂಡನ ಧ್ವನಿ ಕೇಳುತ್ತಲೇ ಓಬವ್ವೆಗೆ ದುಃಖ ಮತ್ತಷ್ಟು ಉಮ್ಮಳಿಸಿ ಬಂತು, ತಡೆಯಲಾಗದೆ ಗಳಗಳನೇ ಅಳತೊಡಗಿದಳು.

ನಗುವಿನೊಂದಿಗೆ ಬರಮಾಡಿಕೊಳ್ತಿದ್ದವಳು ಇಂದು ಅಳುತ್ತಿದ್ದುದು ತಿಪ್ಪಯ್ಯನಿಗೂ ಉಹಿಸಲಾಗಲಿಲ್ಲ. ಒಳಗೆ ಬಂದವನೇ ಅವಳ ಭುಜ ಹಿಡಿದು ಅಲುಗಾಡಿಸುತ್ತಾ ಯಾಕೇ ಯಾರು ಏನಂದ್ರೂ !? ಅದೇನು ಅಂತ ನನಗೆ ಹೇಳಿದ್ರೆ ತಾನೇ ಗೊತ್ತಾಗೋದು.

ಓಬವ್ವ ಬಿಕ್ಕಿ ಬಿಕ್ಕಿ ಅಳುತ್ತಲೇ ಸ್ಪಷ್ಟವಾಗಿ ಮಾತುಗಳೇ ಬರುತ್ತಿಲ್ಲ, ನನ್ನ ಗರತೀತನ ಇವತ್ತು ಬೀದ್ಯಾಗ ಹರಾಜಾಯ್ತು, ಏನೂ ಗೊತ್ತಿಲ್ಲದ ತಿಪ್ಪಯ್ಯ ತುಸು ಕೆಂಡವಾದ. ಬರುವಾಗ ಹಳ್ಳಿಯೊಳಗಿನ ಘಟನೆಗಳೆಲ್ಲ ಎದುರಾಗಿ ಉತ್ತರ ಹುಡುಕತೊಡಗಿದ್ದವು.

ಅಂದ್ರೇ ಪಾಲಕ್ಕ ನನ್ನ ಸೂಳೇ ಅಂದ್ಲು, ಏನೂ ಪಾಲವ್ವ ನಿನಗೆ ಸೂಳೇ ಅಂದ್ಲಾ, ಯಾಕಂತೇ ತಲೆ ಹಿಡಿಯಾಕೆ ಅವ್ಳೇ ಬಂದಿದ್ಳಂತೇನು, ದುಃಖಿಸುತ್ತಲೇ ಗಂಡನ ಎದೆ ಮ್ಯಾಲೆ ತಲೆಯಿಟ್ಟ ಓಬವ್ವ, ಕೂಗಾಡಿ ಮತ್ತಷ್ಟು ಮಾನ ಹರಾಜು ಹಾಕಬ್ಯಾಡ್ರಿ, ಸರೀಕರೆಲ್ಲಾ ಆಗಲೇ ನೋಡಾಗಿದೆ, ಗಾದ್ರಣ್ಣ ಅವ್ಳಿಗೆ ಸಾಯಂಗ ಹೊಡ್ದು ಹೋಗಿದಾನೆ.

 ಬೋಸ ಬಂದು ಅತ್ತೂ ಕರೆದ, ಸಿಟ್ಟಿನ ವ್ಯಾಳೆ ಏನಾದ್ರೂ ಆದೀತು ಅಂತ ಬಿಡ್ಸಾಕ ಹೋದೆ, ಆಗ ನಿನ್ನಿಂದ್ಲೇ ಇದೆಲ್ಲಾ ಅಂತ ಬೀದ್ಯಾಗ ನಿಂತು ಜನ್ರ ಮುಂದೆ ಹೇಳಿ ಹೇಳಿ ಅಳ್ತಿದಾಳೆ. ತಿಪ್ಪಯ್ಯನಿಗೂ ಕುಳಿತು ಕೇಳುವಷ್ಟು ಸಹನೆಯೂ ಇದ್ದಂತಿರಲಿಲ್ಲ. ಸಿಡಿಮಿಡಿಯಾದ, ಸಿಟ್ಟು ನೆತ್ತಿಗೇರಿ ಕಣ್ಣು ಮುಂಜಾದಂತಾದ್ವು, ಮೇಲೆದ್ದವನೇ ತಡಿ ಬಂದೆ ಎಂದು ಹೊರಟ.
ಲೇಖನ: ಕುಮಾರ ಬಡಪ್ಪ.               ನಾಳೆಗೆ……..

 

Share This Article
error: Content is protected !!
";