ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭವಿಷ್ಯೀಕರಣಗೊಳ್ಳಿ ಎನ್ನುವ ಆಶಯ. ನುಡಿಯಂತೆ ತಂತ್ರಜ್ಞಾನವು ಸಾಮಾಜಿಕ ಒಳಿತನ್ನು, ಆರ್ಥಿಕ ನ್ಯಾಯವನ್ನು, ಸುಸ್ಥಿರ ಅಭಿವೃದ್ಧಿಯನ್ನು ಮತ್ತು ಸಮಾಜದ ಎಲ್ಲರಿಗೂ ಸಮೃದ್ಧಿಯನ್ನು ಒದಗಿಸಬೇಕು ಎಂಬ ನಮ್ಮ ನಂಬಿಕೆಯನ್ನು ನಾವು ಪುನರುಚ್ಚರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28 ನೇ ಆವೃತ್ತಿ ಉದ್ಘಾಟಿಸಿ ಅವರು ಮಾತನಾಡಿದರು.
ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ ಕೂಡಿರುವ ಡಿಜಿಟಲ್ ಯುಗದಲ್ಲಿ ನಾವು ನಿಂತಿದ್ದೇವೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025 ದಿಟ್ಟ, ಮಾನವೀಯ ಮತ್ತು ಪರಿವರ್ತನಾತ್ಮಕ ಭವಿಷ್ಯವನ್ನು ಸಹ-ಸೃಷ್ಟಿಸಲು ಇಡೀ ಜಗತ್ತಿಗೆ ಕರ್ನಾಟಕದ ಆಹ್ವಾನವಾಗಿದೆ. ದಶಕಗಳಿಂದ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ. ಆದರೆ ಇಂದು, ಅದು ಇನ್ನೂ ದೊಡ್ಡದಾಗಿ, ನಾವೀನ್ಯತೆ, ಪ್ರತಿಭೆ, ಸಂಶೋಧನೆ ಮತ್ತು ತಾಂತ್ರಿಕ ನಾಯಕತ್ವದ ಮುಂಚೂಣಿಯಲ್ಲಿ ಜಾಗತಿಕ ಕೇಂದ್ರವಾಗಿ ಬೆಳೆದು ನಿಂತಿದೆ ಎಂಬುದನ್ನು ಹೇಳಲು ಹೆಮ್ಮೆಯಾಗುತ್ತದೆ.
ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಕರ್ನಾಟಕದ ಬೆಳವಣಿಗೆ ಆಕಸ್ಮಿಕವಲ್ಲ; ಇದು ದೂರದೃಷ್ಟಿಯ ನೀತಿಗಳು, ಆಳವಾದ ಸಾಂಸ್ಥಿಕ ಶಕ್ತಿ ಮತ್ತು ಪ್ರತಿ ಹಂತದಲ್ಲೂ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಪೋಷಿಸುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿದೆ.
ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ. 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ.ರಾಜ್ಯದ ನಿರುದ್ಯೋಗ ಪ್ರಮಾಣ 4.3% ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ.
ಬೆಂಗಳೂರು ನಗರವು IISc, IIM-B, IIIT-B, NCBS, JNCASR, NIMHANS, DRDO ಪ್ರಯೋಗಾಲಯಗಳು, ISRO ಕೇಂದ್ರಗಳು ಮತ್ತು ಹಲವಾರು ವಿಶ್ವ ದರ್ಜೆಯ ಖಾಸಗಿ ವಿಶ್ವವಿದ್ಯಾಲಯಗಳಂತಹ ಪ್ರಮುಖ ಸಂಸ್ಥೆಗಳ ತವರಾಗಿ, ಸಾಟಿಯಿಲ್ಲದ ಬೌದ್ಧಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಪೋಷಿಸುತ್ತದೆ ಎಂಬುದು ಅತ್ಯಂತ ಮಹತ್ವದ ವಿಚಾರ. ಉದ್ಯಮಶೀಲತಾ ಶಕ್ತಿಗೆ ಬೆಂಗಳೂರು ಅನ್ವರ್ಥವಾಗಿದೆ. ಕರ್ನಾಟಕವು 16,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದೆ ಮತ್ತು ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟನ್ನು ರಾಜ್ಯವು ಕೊಡುಗೆ ನೀಡಿದೆ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

