ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಉತ್ಸಾಹಿ ಉದ್ದಿಮೆದಾರರು, ಕೈಗಾರಿಕೋದ್ಯಮಗಳು ಸೇರಿದಂತೆ ಇತರೆ ವಲಯದವರಿಗಾಗಿ ನವೆಂಬರ್-12 ರಿಂದ 16 ರವರೆಗೆ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸ್ವದೇಶಿ ಮೇಳ ಏರ್ಪಡಿಸಲಾಗಿದೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ತಿಳಿಸಿದರು.
ಇಲ್ಲಿನ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾವಲಂಬನೆಯ ಪರಿಕಲ್ಪನೆ ಹಿನ್ನೆಲೆಯಲ್ಲಿ ಸ್ವದೇಶಿ ಮೇಳೆ ಆಯೋಜಿಸಲಾಗಿದ್ದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಹಿರಿಯರು ಸ್ವದೇಶಿ ವಸ್ತುಗಳನ್ನು ಬಳಸಬೇಕೆಂಬ ಕನಸು ಕಂಡಿದ್ದರು.
ಅಂತಹ ಮಹನೀಯರ ಕನಸು ನನಸು ಮಾಡುತ್ತಿರುವ ಪ್ರಧಾನಿ ನರೇಂದ್ರಮೋದಿರವರು ಉದ್ಯಮಿಗಳು, ಮಹಿಳಾ ಉದ್ಯಮಿಗಳು, ಯುವ ಜನಾಂಗ ಉತ್ತೇಜಿಸುವುದಕ್ಕಾಗಿ ಸ್ವದೇಶಿ ಮೇಳ ಆಯೋಜಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವದೇಶಿ ಮೇಳದಲ್ಲಿ 200 ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗುತ್ತದೆ. ಆಸಕ್ತಿಯುಳ್ಳವರು ಆನ್‍ಲೈನ್ ಮೂಲಕ ಬುಕ್ಕಿಂಗ್ ಮಾಡುತ್ತಿದ್ದಾರೆ ಎಂದು ಸಂಸದರು ತಿಳಿಸಿದರು.
ಪ್ರಧಾನಿ ಮೋದಿ ಅವರು ಆತ್ಮ ನಿರ್ಭರ ಮೂಲಕ ದೇಶದ ಅರ್ಥ ವ್ಯವಸ್ಥೆ ಗಟ್ಟಿಗೊಳಿಸುತ್ತಿದ್ದಾರೆ. ಸ್ವದೇಶಿ ಮೇಳದ ಮೂಲಕ ಐತಿಹಾಸಿಕ ಚಿತ್ರದುರ್ಗದ ಗತ ವೈಭವ ಹೆಚ್ಚಿಸಲಾಗುವುದು. ಕಲಾ ತಂಡಗಳನ್ನು ಜೋಡಿಸುವ ಪ್ರಯತ್ನವಾಗುತ್ತಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವದೇಶಿ ಮೇಳ ಯಶಸ್ವಿಗೊಳಿಸಬೇಕು ಸಂಸದ ಕಾರಜೋಳ ಅವರು ಮನವಿ ಮಾಡಿದರು.
ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್ ಮಾತನಾಡಿ, ಜಿಲ್ಲೆಯಾದ್ಯಂತ ಪ್ರತಿ ಮನೆಗೆ ಸ್ವದೇಶಿ ಮೇಳದ ಕರಪತ್ರಗಳನ್ನು ತಲುಪಿಸಲಾಗುವುದು. ಅಲ್ಲದೆ ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆ ಮಾಡುವುದರ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮೇಳದ ಮುಖ್ಯ ಉದ್ದೇಶವಾಗಿದೆ. ಇದರ ಜೊತೆಯಲ್ಲಿ ಉದ್ಯಮಿಗಳಿಗೆ ಒತ್ತು ಕೊಟ್ಟು ಆಕರ್ಷಿಸಲಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳನ್ನು ಸ್ವದೇಶಿ ಮೇಳದಲ್ಲಿ ಮಳಿಗೆ ಹಾಕಲು ಅವಕಾಶ ಕಲ್ಪಿಸುವುದು ಎಂದು ನವೀನ್ ಹೇಳಿದರು.
ಸ್ವದೇಶಿ ಮೇಳಕ್ಕೆ ಕೇಂದ್ರ ಸಚಿವರಾದ ಶೋಭ ಕರಂದ್ಲಾಜೆ, ಪ್ರಹ್ಲಾದ್‍ಜೋಶಿ, ಸೋಮಣ್ಣ, ಹೆಚ್.ಡಿ.ಕುಮಾರಸ್ವಾಮಿ ಇವರುಗಳನ್ನು ಆಹ್ವಾನಿಸಲಾಗುತ್ತದೆ. ಅಲ್ಲದೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು ಸ್ವದೇಶಿ ಮೇಳದ ಉದ್ಘಾಟನೆಯಲ್ಲಿ ಭಾಗವಹಿಸಲಿದ್ದಾರೆಂದು ನವೀನ್ ಮಾಹಿತಿ ನೀಡಿದರು.
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಸ್ವದೇಶಿ ಮೇಳದ ಕರ್ನಾಟಕ ಪ್ರಾಂತ ಉಸ್ತುವಾರಿ ಜಗದೀಶ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಬಿ.ಸಿ ಹನುಮಂತೆಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷ ಎ.ಮುರಳಿ, ಕೋಗುಂಡೆ ದ್ಯಾಮಣ್ಣ, ಮಾಧುರಿ ಗಿರೀಶ್, ಕೆ.ದ್ಯಾಮೇಗೌಡ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

