ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅವ್ವ
————–
ನೀ ಪಟ್ಟ ಶ್ರಮ
ನನ್ನ ನೆನಪಿನಂಗಳದಲ್ಲಿ
ಸುಳಿದಾಡುತ್ತಲೇ ಇದೆ
ಮಾಡುವ
ತಪ್ಪುಗಳ ಅಣಕಿಸುತ್ತಲೇ
ಹೀಗೆ…….
ಗೂಡು ಕಟ್ಟಿ ಕಾವು ಕೊಟ್ಟು
ಬಸಿದ ಬೆವರಿನ
ತಂಗಳ ಉಣಿಸಿ
ಚಿಗುರು ಕನಸುಗಳ
ತೆಕ್ಕೆಯೊಳಗೆ ತಳ್ಳಿ ಬಿಡುತ್ತಿದ್ದೆ
ಅವರಿವರ ಮತ್ಯಾರವೋ
ಮಕ್ಕಳ ಆಟಿಕೆಗಳನ್ನ
ನಿದ್ದೆಯೊಳಗೇ ತರಿಸಿಬಿಡುತ್ತಿದ್ದೆ
ಬದುಕ ಸೆರಗೊಳಗೆ
ನಮ್ಮ ಕಟ್ಟಿಕೊಂಡು
ನಡೆದು ಬಿಡುತ್ತಿದ್ದೆ
ಹೊತ್ತೇರಿದ ತುತ್ತಾದರೂ
ನಿನ್ನ ಬತ್ತಿದ ಎದೆಯೊಳಗೇ ಆಗಿಬಿಡುತ್ತಿತ್ತು
ನೆಲ ಹಾಸಿಗೆ
ಮುಗಿಲ ಹೊದಿಕೆಯಲಿ
ನಿನ್ನಿಂಪು ಕೇಳುತ್ತಲೇ
ಕಳೆದ ದಿನಗಳು ಅವೆಷ್ಟೋ
ನಿನ್ನ ಹೆಬ್ಬೆಟ್ಟಿನ ನೋವಿಗೆ
ಗುಳಿ ಬಿದ್ದ ಕಣ್ಗಳಲಿ
ಅನುಕುತ್ತಿದ್ದ ಹನಿಯೊಳಗೆ
ಅಕ್ಷರಗಳುಣಿಸುವ
ತವಕವ ಗ್ರಹಿಸುತ್ತಿದ್ದೆ
ಶಾಲೆ ಒಲ್ಲದ ನನಗೆ
ನೀ ಕೊಟ್ಟ ಶಿಕ್ಷೆಯೇ
ಬೆಳಕಾದುದ ಮರೆಯಲಾರೆ
ಅಂತೂ ಅವ್ವ
ನೀ ಪಟ್ಟ ಶ್ರಮ
ನನ್ನ ನೆನಪಿನಂಗಳದಲ್ಲಿ
ಸುಳಿದಾಡುತ್ತಲೇ ಇದೆ
ನನ್ನೆಲ್ಲ ತಪ್ಪುಗಳ ದಿಟ್ಟಿಸುತ್ತ….
ಕವಿತೆ:ಕುಮಾರ್ ಬಡಪ್ಪ, ಚಿತ್ರದುರ್ಗ.