ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸ್ವೀಡನ್, ಸ್ಟಾಕ್ಹೋಮ್: #SAAB ಕಂಪನಿಯೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು ಶೀಘ್ರದಲ್ಲೇ ಉತ್ಪನ್ನ ನಿರ್ವಹಣಾ ತಂಡ ಬೆಂಗಳೂರಿಗೆ ಭೇಟಿ ನೀಡಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ ಪಾಟೀಲ್ ತಿಳಿಸಿದರು.
ಸ್ವೀಡನ್ ನ ಪ್ರಖ್ಯಾತ ವಿಮಾನೋದ್ಯಮ ಮತ್ತು ರಕ್ಷಣಾ ಉತ್ಪನ್ನ ತಯಾರಿಕಾ ಸಂಸ್ಥೆಯಾದ SAABನ ಮುಖ್ಯ ತಾಂತ್ರಿಕ ಅಧಿಕಾರಿ ಕ್ರಿಸ್ಚಿಯನ್ ಹೆಡೆಲಿನ್ ಅವರೊಂದಿಗೆ ವಿನ್ಯಾಸ ಮತ್ತು ತಯಾರಿಕಾ ಸಹಭಾಗಿತ್ವದ ಪ್ರಮುಖ ಅವಕಾಶಗಳ ಬಗ್ಗೆ ಫಲಪ್ರದ ಮಾತುಕತೆ ನಡೆಸಲಾಯಿತು ಎಂದು ಸಚಿವರು ತಿಳಿಸಿದರು.
SAAB ಸಂಸ್ಥೆಯು ಭಾರತವನ್ನು ತನ್ನ ಜಾಗತಿಕ ತಂತ್ರಯೋಜನೆಯ ಪ್ರಮುಖ ಕೇಂದ್ರವಾಗಿ ಗುರುತಿಸಿದ್ದು, ಕರ್ನಾಟಕದಲ್ಲಿ ಇಂಜಿನಿಯರಿಂಗ್ & ಡಿಸೈನ್ ಕ್ಷೇತ್ರವನ್ನು ವಿಸ್ತರಿಸಲು ಅಪಾರ ಆಸಕ್ತಿ ವ್ಯಕ್ತಪಡಿಸಿತು ಎಂದರು.
ಭಾರತದಲ್ಲಿ ನಂ.1 ಸ್ಥಾನದಲ್ಲಿರುವ ನಮ್ಮ ರಾಜ್ಯದ ಕೈಗಾರಿಕಾ ಪರಿಸರದ ಶಕ್ತಿ ಮತ್ತು ಜಾಗತಿಕ ವಿಮಾನೋದ್ಯಮ–ರಕ್ಷಣಾ ಉತ್ಪಾದನೆಗೆ ಕರ್ನಾಟಕ ನೀಡುತ್ತಿರುವ ಕೊಡುಗೆಗಳನ್ನ ವಿವರಿಸಲಾಯಿತು ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ರಾಜ್ಯದ ಸಾಮರ್ಥ್ಯದಿಂದ ಪ್ರಭಾವಿತವಾಗಿರುವ SAAB ಸಂಸ್ಥೆಯು, ಮುಂದಿನ ಹಂತದ ಸಹಕಾರದ ಭಾಗವಾಗಿ ಸದೃಢ ವ್ಯಾವಹಾರಿಕ ಸಂಬಂಧಗಳನ್ನು ರೂಪಿಸಲು ತನ್ನ ಉತ್ಪನ್ನ ನಿರ್ವಹಣಾ ತಂಡವನ್ನು ಬೆಂಗಳೂರಿಗೆ ಕಳುಹಿಸಲು ನಿರ್ಧರಿಸಿದೆ ಎಂದು ಸಚಿವರು ತಿಳಿಸಿದರು.