ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಣಿ ವಿಲಾಸ ಸಾಗರದಲ್ಲಿ 126 ಅಡಿ ನೀರಿದ್ದು ಪೋಲಾಗದಂತೆ ಎಚ್ಚರವಹಿಸಿ ಜೂ.27ರ ಶುಕ್ರವಾರ ರಾತ್ರಿಯಿಂದ ಮುಂದಿನ ಜುಲೈ-27ರ ಒಂದು ತಿಂಗಳ ಕಾಲ ವಿವಿ ಸಾಗರ ಅಚ್ಚುಕಟ್ಟು ರೈತರ ತೋಟಗಾರಿಕೆ ಮತ್ತು ಕೃಷಿ ಚಟುವಟಿಕೆಗೆ ನೀರು ಹರಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ವಾಣಿವಿಲಾಸ ಸಾಗರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶುಕ್ರವಾರ ರಾತ್ರಿ ಕಣಿವೆ ಮಾರಮ್ಮ ದೇವಿಗೆ ಪೂಜೆ ಸಲ್ಲಿಸಿ ಅಂದು 12.30ಕ್ಕೆ ಎರಡು ಕಾಲುವೆಗಳಲ್ಲಿ ನೀರು ಹರಿಸಬೇಕು. ಈ ಸಂದರ್ಭದಲ್ಲಿ ಜೀವ ಹಾನಿ ಆಗದಂತೆ ಪ್ರತಿಯೊಬ್ಬರು ಎಚ್ಚರ ವಹಿಸಬೇಕು. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಸೇರಿದಂತೆ ಕಾಲುವೆಗಳು ಹೋಗುವ ಮಾರ್ಗದಲ್ಲಿ ಜನ, ಜಾನುವಾರುಗಳು, ಮಕ್ಕಳು, ಮಹಿಳೆಯರು ಕಾಲುವೆಗಳಿಗೆ ಇಳಿಯದಂತೆ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಹೇಳಿದರು.
ಎರಡು ಕಾಲುವೆಗೆ ನೀರು ಹರಿಸಲು ಗೇಟ್ ಎತ್ತಿ ನೀರು ಹರಿಸಬೇಕು. ಈ ವೇಳೆಗೆ ಎಲ್ಲ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿಗೂ ನೀರು ಹರಿಯಬೇಕು ಎಂದು ತಿಳಿಸಿದರು.
ನೀರು ಇದೆ ಎಂದು ಬೇಕಾಬಿಟ್ಟಿಯಾಗಿ ಜಮೀನುಗಳಲ್ಲಿ ನೀರು ನಿಲ್ಲಿಸುವುದಾಗಲಿ, ಪೋಲು ಮಾಡಿ ಹಳ್ಳಕೊಳ್ಳಗಳಿಗೆ ಹರಿಯುವುದನ್ನು ರೈತರು ತಪ್ಪಿಸಿ ನೀರು ಉಳಿಸಿಕೊಳ್ಳುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯ ಎನ್ನುವುದನ್ನು ಮರೆಯಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊಲ, ಗದ್ದೆ, ತೋಟಗಳಲ್ಲಿ ಮೂರು ಅಡಿ ನೀರು ನಿಲ್ಲಿಸುವ ಪದ್ಧತಿ ಕೈಬಿಡಿ. ಅಗತ್ಯ ಇರುವಷ್ಟು ನೀರನ್ನು ರೈತರು ಬಳಸಿಕೊಳ್ಳಬೇಕು. ಅವರು, ತೆಂಗು, ಅಡಿಕೆ, ಮಾವು, ಸಪೋಟದಂತಹ ತೋಟಗಾರಿಕೆ ಬೆಳೆಗಳಿಗಷ್ಟೇ ನೀರು ಪೂರೈಕೆ ಮಾಡಿ. ಇತ್ತೀಚೆಗೆ ಹಿರಿಯೂರು ನಗರ ಸುತ್ತ ಮುತ್ತ ಸಾಕಷ್ಟು ಪ್ರದೇಶ ವಸತಿಗೆ ಜಮೀನುಗಳನ್ನು ಬಳಕೆ ಮಾಡಲಾಗಿದ್ದು ಆ ಜಮೀನುಗಳಿಗೆ ನೀರು ಹರಿಸಿದರೆ ಪೋಲಾಗುತ್ತದೆ, ನೀರು ಪೋಲಾಗದಂತೆ ಎಚ್ಚರವಹಿಸಿ ಎಂದು ಹೇಳಿದರು.
ಅಚ್ಚುಕಟ್ಟು ಪ್ರದೇಶದ ಕೊನೆ ರೈತರಿಗೂ ನೀರು ಹರಿಯಬೇಕು. ರೈತರು ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಜಮೀನಿನಲ್ಲಿ ನಿಲ್ಲಿಸುವುದರಿಂದ ನೀರು ಪೋಲಾಗುತ್ತದೆ. ಆವಿಯಾಗುತ್ತದೆ. ಕೇವಲ ಭೂಮಿ ನೆನೆಯುವಷ್ಟು ನೀರು ಬಳಸಿಕೊಳ್ಳಲು ರೈತರಿಗೆ ಕಂದಾಯ, ನೀರಾವರಿ ಇಲಾಖೆ ಅಧಿಕಾರಿಗಳು ತಿಳಿ ಹೇಳಬೇಕು. ನೀರು ಬಿಟ್ಟಾಗ ತಹಶೀಲ್ದಾರ್, ಆರ್‌ಐ, ನೀರಾವರಿ ಇಲಾಖೆ ಇಂಜಿನಿಯರ್ ಗಳು ಸದಾ ವೀಕ್ಷಣೆ ಮಾಡುತ್ತಿರಬೇಕೆಂದು ವೆಂಕಟೇಶ್ ಅವರು ಸೂಚಿಸಿದರು.
ನೀರು ಹರಿಸುವ ಸಮಯದಲ್ಲಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಹದ ಮಳೆಯಾದರೆ ನಾಲೆಗಳಲ್ಲಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದಕ್ಕೂ ಮುನ್ನ ನೀರಾವರಿ ಸಲಹಾ ಸಮಿತಿ ಸದಸ್ಯರುಗಳು ಮಾತನಾಡಿ ವಿವಿಸಾಗರ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬೇಕು. ಅಚ್ಚುಕಟ್ಟು ಪ್ರದೇಶದ ರೈತರ ತೆಂಗು-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಹಾಗು ರೈತರ ಬೆಳೆದಿರುವ ವಿವಿಧ ಪಸಲುಗಳನ್ನು ಉಳಿಸಿಕೊಳ್ಳಲು ನೀರು ಹರಿಸುವುದು ಅಗತ್ಯವಿದ್ದು ನಾಲೆಗಳಿಗೆ ನೀರು ಹರಿಸಬೇಕು ಎಂದು ಜಿಲ್ಲಾಧಿಕಾರಿಗಳಲ್ಲಿ ಅವರು ಕೋರಿದರು.
ನಾಲೆಗಳಲ್ಲಿ ನೀರು ಹರಿಸುವುದರಿಂದ ನಾಲೆಯ ಅಕ್ಕಪಕ್ಕದ ಎಲ್ಲಾ ಗ್ರಾಮಗಳ ಅಂತರ್ಜಲ ಮಟ್ಟ ಹೆಚ್ಚಾಗಿ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಅಲ್ಲದೇ ತೋಟಗಾರಿಕೆ ಬೆಳೆಗಳು ಹಾಗೂ ಅಲ್ಪ ಸ್ವಲ್ಪ ಒಣಗಿರುವ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ಸಲಹಾ ಸಮಿತಿ ಸದಸ್ಯರು ಅಭಿಪ್ರಾಯಪಟ್ಟರು.
ಇದೇ ಜೂನ್-27 ರಿಂದ ನೀರು ಹರಿಸುವಂತೆ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು. ಅಷ್ಟರೊಳಗೆ ಜಲಾಶಯದ ಎಡ-ಬಲ ನಾಲೆಗಳನ್ನು ಸ್ವಚ್ಛತೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ವಾಣಿವಿಲಾಸ ಸಾಗರ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಸಿ.ಎನ್.ಸುಂದರಂ, ಪಿಟ್ಲಾಲಿ ಪಿ.ಕೆ.ಸುಂದರೇಶ್, ಆಸಿಫ್ ಅಲಿ, ಎನ್.ಅನಿಲಕುಮಾರ್, ವೈ.ನಾಗರಾಜು, ವಿ.ವಿ.ಸಾಗರ ಉಪವಿಭಾಗದ ಕಾರ್ಯಪಾಲಕ ಇಂಜಿನಿಯರ್ ಬಾರಿಕರ ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಯಕುಮಾರ.ಆರ್.ಎಸ್, ಸಹಾಯಕ ಇಂಜಿನಿಯರ್ ಎಸ್.ನಿಚ್ಚೇಗೌಡ, ಸಹಾಯಕ ಎಂಜಿನಿಯರ್ ಎಸ್.ಪಿ. ನಾಗೇಂದ್ರ, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಲೋಕೇಶ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ತಹಶೀಲ್ದಾರ್ ರಾಜೇಶ್ ಕುಮಾರ್ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.