ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಬಾಲ್ಯ ವಿವಾಹ ಪ್ರಕರಣಗಳು ಎಲ್ಲಿಯಾದರೂ ಕಂಡು ಬಂದಲ್ಲಿ ತಕ್ಷಣವೆ ಎಫ್.ಐ.ಆರ್.ದಾಖಲಿಸುವಂತೆ ತಹಶೀಲ್ದಾರ್ ಗೋವಿಂದರಾಜ್ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಬಾಲ್ಯ ವಿವಾಹ ನಿಷೇದ ತಡೆ ಕಾಯ್ದೆ, ಮಕ್ಕಳು ಮತ್ತು ಮಹಿಳೆಯರ ಸಾಗಾಟ ಹಾಗೂ ಮಾರಾಟ ತಡೆ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕುರಿತು ತಹಶೀಲ್ದಾರ್ ಗೋವಿಂದರಾಜ್‌ರವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಮೊನ್ನೆ ನಡೆದ ತಾಲ್ಲೂಕು ಸಮನ್ವಯ ಸಮಿತಿ ಸಭೆಯಲ್ಲಿ ಅಕ್ಷಯ ತೃತೀಯ ಬಸವ ಜಯಂತಿಯಂದು ಒಳ್ಳೆಯ ದಿನವಿದೆ ಎಂಬ ನೆಪದಲ್ಲಿ ಪೋಷಕರು ಅಪ್ರಾಪ್ತ ಬಾಲಕಿಯರ ಮದುವೆ ಮಾಡುತ್ತಿರುತ್ತಾರೆ. ಅಂತಹ ಕಡೆ ಹೆಚ್ಚಿನ ನಿಗಾ ವಹಿಸಿ ಬಾಲ್ಯ ವಿವಾಹವನ್ನು ತಡೆಗಟ್ಟುವ ಜವಾಬ್ದಾರಿ ಎಲ್ಲರ ಮೇಲಿದೆ. ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸಮಿತಿಗಳಿವೆ. ನಿಮ್ಮ ನಿಮ್ಮ ಜವಾಬ್ದಾರಿಯನ್ನು ಚಾಚೂ ತಪ್ಪದೆ ಪಾಲಿಸಿ ಬಾಲ್ಯ ವಿವಾಹಗಳಾಗುವುದನ್ನು ತಡೆಗಟ್ಟಿ ಎಂದು ಹೇಳಿದರು.
ಹೆಣ್ಣಿಗೆ ೧೮ ವರ್ಷ, ಗಂಡಿಗೆ ೨೧ ವರ್ಷಗಳಾಗಿರಬೇಕು. ಆಗ ಮಾತ್ರ ವಿವಾಹ ಮಾಡಿಕೊಳ್ಳಲು ಅರ್ಹರು. ಈ ನಿಯಮವನ್ನು ಉಲ್ಲಂಘಿಸಿ ಮಕ್ಕಳ ವಿವಾಹವಾದರೆ ಪೋಷಕರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಡಿಯಲ್ಲಿ ಅವಕಾಶವಿದೆ ಎನ್ನುವುದನ್ನು ಗ್ರಾಮೀಣ ಮಟ್ಟದಲ್ಲಿ ಜನತೆಗೆ ಮನವರಿಕೆ ಮಾಡಿಕೊಟ್ಟಾಗ ಮಾತ್ರ ಬಾಲ್ಯ ವಿವಾಹ ನಿಯಂತ್ರಣಕ್ಕೆ ಬರಲು ಸಾಧ್ಯ ಎಂದರು.
ಭರಮಸಾಗರ ಸಿಡಿಪಿಓ ಸುಧಾ, ಚಿತ್ರದುರ್ಗ ಸಿಡಿಪಿಓ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ನಗರಸಭೆ ಪೌರಾಯುಕ್ತೆ ರೇಣುಕಾ, ಬಸವೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ವಿ.ಕೆ.ಶಂಕರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.