ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಮಹಾಸಭಾದ ವತಿಯಿಂದ ನಗರದಲ್ಲಿ ಶುಕ್ರವಾರ ತಮಟೆ ಚಳುವಳಿ ನಡೆಸಲಾಯಿತು.
ನಗರದ ಅಂಬೇಡ್ಕರ್ ಪ್ರತಿಮೆಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದ ವರೆಗೆ ಆಗಮಿಸಿದ ಪ್ರತಿಭಟನಕಾರರು ದಾರಿ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾದಿಗ ಮಹಾಸಭಾದ ರಾಜ್ಯಾಧ್ಯಕ್ಷ ಹನುಂತಪ್ಪ ದರ್ಗಾ, ಚಿತ್ರದುರ್ಗದಲ್ಲಿ ಹೊಲಸೆ ಬಂದ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದು, ಸಮುದಾಯದ ಬಗ್ಗೆ ಯಾವುದೇ ಆಸಕ್ತಿ ಇಲ್ಲ.
ಜಿಲ್ಲೆಯಲ್ಲಿ ಏನೇ ದೌರ್ಜನ್ಯ ನಡೆದರೂ ಕೂಡ ಅಲ್ಲಿಗೆ ಹೋಗಿ ನೊಂದವರಿಗೆ ಸಾಂತ್ವನ ಹೇಳುವುದು ಜಿಲ್ಲೆಯ ಮಾದಿಗ ಸಮುದಾಯ ಆಗಿದೆ. ಮಾಜಿ ಸಂಸದರು ಕರೆದಿರುವ ಹೋರಾಟಕ್ಕೆ ಜಿಲ್ಲೆಯ ಯಾವ ಮಾದಿಗ ಸಂಘಟನೆಗಳನ್ನು ಕರೆದಿಲ್ಲ. ತಮಗೆ ಬೇಕಾದಂತಹ ನಾಲ್ಕು ಜನ ಹಿಂಬಾಲಕರನ್ನು ಹಿಡಿದುಕೊಂಡು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಸಮುದಾಯಕ್ಕೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ತೆಗಳಿದರು.
ರಾಜ್ಯ ಸರ್ಕಾರಕ್ಕೆ ಕಣ್ಣು, ಕಿವಿ ಎರಡು ಇಲ್ಲವಾಗಿದೆ. ಒಳ ಮೀಸಲಾತಿಗಾಗಿ ಕಳೆದ ಮೂರು ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ. ನ್ಯಾಯಾಲಯ ನೀಡಿದ ಸೂಚನೆ ಅನ್ವಯ ಒಳ ಮೀಸಲಾತಿ ನೀಡಲು ವಿಳಂಬ ಆಗುತ್ತಿದೆ. ಇದನ್ನು ವಿರೋಧಿಸಿ ಹೋರಾಟ ಮಾಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಶೀಘ್ರವಾಗಿ ಒಳ ಮೀಸಲಾತಿಯನ್ನು ಜಾರಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಮಾದಿಗ ಮಹಾಸಭಾದಿಂದ ಹೋರಾಟ ತೀವ್ರಗೊಳಿಸಿ ಮೀಸಲಾತಿ ಪಡೆಯುವವರೆಗೂ ವಿರಮಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಶ್ರೀನಿವಾಸ್ ಬಾಳೆಕಾಯಿ, ಶೋಷಿತ ಸಮಾಜದ ರಾಜ್ಯಾಧ್ಯಕ್ಷ ರಾಜಪ್ಪ, ಕಣಿವೆಮಾರಮ್ಮ ಸಂಘದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಪೌರ ಕಾರ್ಮಿಕ ಸಂಘದ ಅಧ್ಯಕ್ಷ ರಾಜು, ವಿಶ್ವ ನಾರಾಯಾಣ ಮೂರ್ತಿ, ಜಗದೀಶ, ರಾಜಪ್ಪ, ಹನುಮಂತಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

