ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಸರ್ಕಾರಿ ಅಧಿಕಾರಿಗಳು/ನೌಕರರು ಈಗಾಗಲೇ ಜಾರಿಯಲ್ಲಿರುವ ನಿಯಮ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸವನ್ನು ಸರ್ಕಾರ ಮುಂದಿನ ಎರಡು ವಾರಗಳಲ್ಲಿ ಮಾಡದಿದ್ದರೆ ಸರ್ಕಾರಿ ಅಧಿಕಾರಿ/ನೌಕರರ ಕಚೇರಿ ಅಥವಾ ಮನೆಗಳ ಎದುರು KRS ಪಕ್ಷದ ಸೈನಿಕರು ತಮಟೆ ಚಳುವಳಿ ನಡೆಸಿ ಮುಖತಃ ಕಾನೂನು ಪಾಲನೆಯ ಪಾಠ ಮಾಡುವ ಮೂಲಕ ಸರ್ಕಾರಕ್ಕೆ ಮುಜುಗರ ತರುವ ಕೆಲಸಕ್ಕೆ ಮುಂದಾಗಬೇಕಾಗುತ್ತದೆ ಎಂದು ಕೆ ಆರ್ ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಬಿ ಶಿವಶಂಕರ್ ತಿಳಿಸಿದ್ದಾರೆ.
ಈ ಕುರಿತು ನಗರದ ಕೆ.ಆರ್.ಎಸ್ ಪಕ್ಷದ ಕೇಂದ್ರ ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಿ ನೌಕರರು ತಮ್ಮ ಆಸ್ತಿ ವಿವರವನ್ನು ಕಾಲಕಾಲಕ್ಕೆ ಸಾರ್ವಜನಿಕರಿಗೆ ತಿಳಿಯುವಂತೆ ಬಹಿರಂಗಗೊಳಿಸುವ ಕ್ರಮವನ್ನು ಕಟ್ಟುನಿಟ್ಟಾಗಿ ಸರ್ಕಾರಕ್ಕೆ ಜಾರಿ ಮಾಡಬೇಕಿದೆ. ಕೆಪಿಎಸ್ಸಿ ಸೇರಿದಂತೆ ಯಾವುದೇ ಸರ್ಕಾರಿ ನೇಮಕಾತಿಗಳನ್ನು ಪಾರದರ್ಶಕವಾಗಿ ನಡೆಸಲು ಎಲ್ಲಾ ಸರ್ಕಾರಗಳು ವಿಫಲವಾಗುತ್ತಿದ್ದು ಸರ್ಕಾರಿ ನೌಕರಿಗಳು ಹಣಕ್ಕೆ ಮಾರಾಟವಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ, ಭ್ರಷ್ಟಾಚಾರ ಮಾಡಲೆಂದೇ ಕೆಲವು ಶ್ರೀಮಂತರು ಲಂಚಕೊಟ್ಟು ಸರ್ಕಾರಿ ಕೆಲಸ ಪಡೆದುಕೊಳ್ಳುತ್ತಿರುವ ಇವತ್ತಿನ ಸಂದರ್ಭದಲ್ಲಿ ಸರ್ಕಾರಿ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹಲವು ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಬೇಕಿವೆ ಎಂದರು.
ಅಕ್ರಮ ಆಸ್ತಿ ಗಳಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಸದಸ್ಯರೂ ಸೇರಿದಂತೆ ರಾಜ್ಯದ ಎಲ್ಲಾ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂಬ ನಿಯಮ ಜಾರಿಯಲ್ಲಿದೆ. ಮುಂದುವರೆದು ರಾಜ್ಯ ಲೋಕಾಯುಕ್ತರು ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ/ನೌಕರ ತನ್ನ ಆಸ್ತಿ ವಿವರವನ್ನು ಸಾರ್ವಜನಿಕ ಪೋರ್ಟಲ್ ಅಲ್ಲಿ ಅಪ್ಲೋಡ್ ಮಾಡುವ ಮೂಲಕ ಬಹಿರಂಗ ಪಡಿಸಬೇಕೆಂದು ಆದೇಶ ಹೊರಡಿಸಿರುವುದು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಒಳ್ಳೆಯ ಕ್ರಮ ಆದರೆ ಸರ್ಕಾರಿ ಅಧಿಕಾರಿಗಳು ಯಾವುದೇ ರೀತಿಯ ಆದೇಶಗಳನ್ನು ಪಾಲಿಸುತ್ತಿಲ್ಲ ಎಂಬುದೇ ವಿಪರ್ಯಾಸ ಎಂದರು.
ಸರ್ಕಾರಿ ನೌಕರರ/ ಅಧಿಕಾರಿಗಳ ಆಸ್ತಿ ಮೇಲೆ ಕಣ್ಣಿಟ್ಟು ಅವರು ಭ್ರಷ್ಟಾಚಾರ ರಹಿತವಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುವ ಹಕ್ಕು ಸರ್ಕಾರಕ್ಕೆ ತೆರಿಗೆ ಕಟ್ಟುವ ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇರುತ್ತದೆ. ಈ ದೃಷ್ಟಿಯಲ್ಲಿ ನೋಡುವುದಾದರೆ ಈಗ ಲೋಕಾಯುಕ್ತ ಹೊರಡಿಸಿರುವ ಆದೇಶ ಸರಿ ಇದ್ದು ಅದನ್ನು ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಪಾಲನೆ ಮಾಡುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ ಎಂದರು.
ಈಗಾಗಲೇ ಇರುವ ನಿಯಮ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಕೆಲಸವನ್ನು ಸರ್ಕಾರ ಮುಂದಿನ ಎರಡು ವಾರಗಳಲ್ಲಿ ಸೂಕ್ತ ಕ್ರಮಗಳೊಂದಿಗೆ ಕೈಗೊಳ್ಳಲಿ ಎಂಬುದೇ ನಮ್ಮ ಆಶಯ ಇಲ್ಲವಾದಲ್ಲಿ ಪ್ರತಿಭಟನೆ ಮೂಲಕ ಉತ್ತರ ನೀಡಲಾಗುವುದು ಎಂದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ವೇಣು, ಜಿಲ್ಲಾ ಪದಾಧಿಕಾರಿಗಳಾದ ಶ್ರೀ ಲೀಲಾ ರಾಮ್, ತಾಲೂಕು ಅಧ್ಯಕ್ಷರಾದ ನಾಗರಾಜ್, ಉಪಾಧ್ಯಕ್ಷರಾದ ಶ್ರೀನಿವಾಸ್, ಕಾರ್ಯದರ್ಶಿ ಮುರಾರಿ, ಮಹಿಳಾ ಘಟಕದ ಅಧ್ಯಕ್ಷರಾದ ರಂಜಿತಾ, ಲಲಿತಾ, ಮಂಜುಳಾ, ದೊಡ್ಡಬಳ್ಳಾಪುರ ಕಾರ್ಮಿಕ ಘಟಕದ ಅಧ್ಯಕ್ಷರಾದ ಫರುಕ್, ಮೌಲ, ವಿಜಯ್, ಹೇಮಂತ್ ಕುಮಾರ್ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಕೆ ಎಸ್ ಪಕ್ಷದ ಸೇನಾನಿಗಳು ಉಪಸ್ಥಿತರಿದ್ದರು.