ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಜಾರಿಮಾಡುವಂತೆ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದರೂ ಸರ್ಕಾರ ಮೀನಾಮೇಷ ಏಣಿಸುತ್ತಿದೆ. ದಲಿತ ಸಮುದಾಯವನ್ನು ಕೇವಲ ಮತಬ್ಯಾಂಕ್‌ಗಳಾಗಿ ಕಾಂಗ್ರೆಸ್ ಪಕ್ಷ ನೋಡುತ್ತಾ ಬಂದಿದೆ ಎಂದು ಮುಖಂಡ ಸೂರನಹಳ್ಳಿಶ್ರೀನಿವಾಸ್ ತಿಳಿಸಿದರು.
ಅವರು, ಶನಿವಾರ ಸಚಿವ ಡಿ.ಸುಧಾಕರ್ ಮನೆ ಮುಂಭಾಗದಲ್ಲಿ ತಾಲ್ಲೂಕು ದಲಿತ ಮುಖಂಡರು ಹಮ್ಮಿಕೊಂಡಿದ್ದ ತಮಟೆಚಳಿವಳಿಯಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೇವಲ ದಲಿತ ಬಗ್ಗೆ ಮೊಸಳೆ ಕಣ್ಣಿರು ಸುರಿಸುವುದು ಬಿಟ್ಟು ಒಳಮೀಸಲಾತಿ ಜಾರಿಗೆ ಕೂಡಲೇ ಆದೇಶ ನೀಡಬೇಕೆಂದರು ತಿಳಿಸಿದರು.
ದಲಿತ ಸಂಘಟನೆಗಳ ಪ್ರಮುಖ ಮುಖಂಡ ಟಿ.ವಿಜಯಕುಮಾರ್ ಮಾತನಾಡಿ, ದಲಿತ ಸಂಘಟನೆಗಳ ಹೋರಾಟಕ್ಕೆ ಯಾವುದೇ ಸರ್ಕಾರಗಳು ಸ್ಪಂದಿಸದ ಕಾರಣ ಸುಪ್ರೀಂಕೋರ್ಟ್‌ಗೆ ಮೊರೆಹೋಗಲಾಗಿತ್ತು. ಕೋರ್ಟ್ ಸುಧೀರ್ಘ ವಿಚಾರಣೆ ನಡೆಸಿ ದಲಿತ ಸಮುದಾಯದ ಸಮಗ್ರ ಅಭಿವೃದ್ದಿಗೆ ಒಳಮೀಸಲಾತಿ ಜಾರಿ ಅವಶ್ಯವೆಂದು ತಿಳಿದು ಆದೇಶ ನೀಡಿದೆ. ಆಡಳಿತ ರೂಡ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮಕೈಗೊಂಡಿಲ್ಲ. ೨೦೨೩ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಸರ್ಕಾರ ಆಡಳಿತಕ್ಕೆ ಬಂದರೆ ಒಳಮೀಸಲಾತಿ ಖಂಡಿತ ಎಂದಿದ್ದರು ಆದರೆ ಈಗ ಮಾತ್ರ ಸ್ವಷ್ಟ ನಿಲುವು ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರವುದು ಸರಿಯಲ್ಲವೆಂದರು.
ತಮಟೆ ಚಳುವಳಿ ನಡೆಸುತ್ತಿದ್ದ ಚಳುವಳಿಗಾರರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಈಗಾಗಲೇ ಮುಖ್ಯಮಂತ್ರಿಗಳು ಸ್ಪಷ್ಟ ನಿರ್ದೇಶನ ನೀಡಿದ್ಧಾರೆ. ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೆ ಎಂದೂ ವಿರೋಧಿಸುವುದಿಲ್ಲ. ಪ್ರಸ್ತುತ ಬೆಳಗಾವಿಯಲ್ಲಿ ನಡೆಸುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮತ್ತೊಮ್ಮೆ ಚರ್ಚಿಸುವ ಭರವಸೆ ನೀಡಿದರು.
ತಮಟೆಚಳುವಳಿಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಮಾರುತಿ, ಹೊಟ್ಟೆಪ್ಪನಹಳ್ಳಿಕಾಂತರಾಜು, ಭೀಮಣ್ಣ, ಆರ್.ಎ.ದಯಾನಂದಮೂರ್ತಿ, ಚಂದ್ರು, ನಾಗರಾಜು, ದ್ಯಾವರನಹಳ್ಳಿತಿಪ್ಫೇಸ್ವಾಮಿ, ಆರ್.ವೀರಭದ್ರಿ, ಎಸ್.ರುದ್ರಮುನಿ, ಪ್ರಕಾಶ್, ಡಿ.ದಯಾನಂದ, ಎಚ್.ಹೊನ್ನೂರುಸ್ವಾಮಿ, ನಿಂಗಣ್ಣ ಮುಂತಾದವರು ಉಪಸ್ಥಿತರಿದ್ದರು.

