ಚಂದ್ರವಳ್ಳಿ ನ್ಯೂಸ್, ಬೆಂಗಳೂರು/ಮೈಸೂರು :
ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಹೊಸ ಮೀಸಲಾತಿ ಅಡಿ ಚುನಾವಣೆ ನಡೆಯಲಿದೆ. ಮೀಸಲಾತಿ ಪಟ್ಟಿ ನೀಡದಿದ್ದರೆ ಹಳೆ ಮೀಸಲಾತಿ ಅನ್ವಯ ಹೈಕೋರ್ಟ್‌ಮೊರೆ ಹೋಗಿ ಈ ವರ್ಷವೇ ರಾಜ್ಯದ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶಿ ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯದ ಮೈಸೂರು, ಶಿವಮೊಗ್ಗ, ದಾವಣಗೆರೆ, ತುಮಕೂರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗಳನ್ನ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಈಗಾಗಲೇ ಐದು ಮಹಾನಗರ ಪಾಲಿಕೆಗಳ ಮತದಾರ ಪಟ್ಟಿ ಸಿದ್ಧವಾಗಿದೆ. ಮತ್ತು ಮೀಸಲಾತಿ ಪಟ್ಟಿ ಸಲ್ಲಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮೀಸಲಾತಿ ಪಟ್ಟಿ ಕೊಟ್ಟರೆ ಚುನಾವಣೆ ನಡೆಸಲು ಸಿದ್ಧ ಎಂದು ಅವರು ಹೇಳಿದರು.
ಇದೇ ರೀತಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಿದೆ. ಆದರೆ ರಾಜ್ಯ ಸರ್ಕಾರ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಿಗೆ ಮೀಸಲಾತಿ ಪಟ್ಟಿ ಒದಗಿಸಲು ಮೇ ಅಂತ್ಯದವರೆಗೆ ಸಮಯ ಕೇಳಿದೆ. ಮೇ ಅಂತ್ಯದ ವೇಳೆಗೆ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್‌ಮೀಸಲಾತಿ ಪಟ್ಟಿಯನ್ನು ಸರ್ಕಾರ ಒದಗಿಸಿದರೆ ನಮಗೆ ಚುನಾವಣೆ ನಡೆಸಲು ಮತ್ತೆ ಎರಡು ತಿಂಗಳು ಸಮಯ ಬೇಕಾಗುತ್ತದೆ ಎಂದು ಅವರು ತಿಳಿಸಿದರು.