ಟಿಎಪಿಎಂಸಿಎಸ್ ನೂತನ ಅಧ್ಯಕ್ಷ ಸಿದ್ದರಾಮಯ್ಯ ಅವಿರೋಧ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಡಿ.ಸಿದ್ದರಾಮಯ್ಯ
, ಉಪಾಧ್ಯಕ್ಷರಾಗಿ ಎನ್.ಜಗನ್ನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಟಿಎಪಿಎಂಸಿಎಸ್ ನ 13 ನಿರ್ದೇಶಕರ ಆಯ್ಕೆಗೆ ಮತದಾನ ನಡೆದಿತ್ತು. ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಟಿಎಪಿಎಂಸಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

- Advertisement - 

ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಸಿದ್ದರಾಮಯ್ಯ ಅವರು ಮಾತನಾಡಿ, ಸಂಘದಲ್ಲಿ ಈ ಹಿಂದೆ ಉತ್ತಮ ಆಡಳಿತ ನೀಡಿರುವುದನ್ನು ಗುರುತಿಸಿ ಎರಡನೇ ಬಾರಿಗೂ ಜನರು ಆರ್ಶೀವಾದ ಮಾಡಿದ್ದಾರೆ. ಹಾಗೆಯೇ ಪಕ್ಷದ ಮುಖಂಡರು ಸಹ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ತಾಲ್ಲೂಕಿನಲ್ಲೇ ಅತ್ಯಂತ ಹಳೆಯ ಸಹಕಾರಿ ಸಂಸ್ಥೆಯಾಗಿರುವ ಟಿಎಪಿಎಂಸಿಎಸ್ ಎಷ್ಟೇ ಲಾಭಗಳಿಸಿದರೂ ಅದು ಷೇರುದಾರರಿಗೆ ತಲುಪುತ್ತದೆ ಎಂದು ತಿಳಿಸಿದರು. 

ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ ಪ್ರಸ್ತುತ ಈ ಸಹಕಾರ ಸಂಘ ರೈತರ ಅನುಕೂಲಕ್ಕಾಗಿ ರಸಗೊಬ್ಬರ, ಪಶುಆಹಾರ, ಗುಣಮಟ್ಟದ ದಿನಸಿ ಸೇರಿದಂತೆ ಸಾಕಷ್ಟು ವಹಿವಾಟು ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಸಂಘವು 6 ಸಾವಿರ ಷೇರುದಾರರು ಹೊಂದಿರುವ ದೊಡ್ಡ ಸಹಕಾರಿ ಸಂಸ್ಥೆಯಾಗಿದೆ. ಕಾಂಗ್ರೆಸ್ ಪಕ್ಷವು ಸದಾ ಸಹಕಾರಿ ಕ್ಷೇತ್ರದ ಏಳಿಗೆಗಾಗಿ ಶ್ರಮಿಸುತ್ತಲೇ ಬರುತ್ತಿದೆ. ಈ ನಂಬಿಕೆಯ ಮೇಲೆಯೇ ಕ್ಷೇತ್ರದ ಜನರು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಆಯ್ಕೆ ಮಾಡಿದ್ದಾರೆ ಎಂದರು.

- Advertisement - 

ದೊಡ್ಡಬಳ್ಳಾಪುರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ,ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿ ವೆಂಕಟೇಶ್‌  ನಗರದ ಬ್ಲಾಕ್‌ಅಧ್ಯಕ್ಷ ಕೆ.ಪಿ.ಜಗನ್ನಾಥ್, ಹಾಗೂ ಸಂಘದ ನಿರ್ದೆಶಕರು ಗಣ್ಯರು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

 

 

 

Share This Article
error: Content is protected !!
";