ನವೆಂಬರ್-7, 8 ಮತ್ತು 9 ರಂದು ತರಳಬಾಳು ನುಡಿಹಬ್ಬ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ ಆರೇಳು ದಶಕಗಳಿಂದ ಶಿಕ್ಷಣ, ಧರ್ಮ, ಕೃಷಿ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲೂ ವಿಶಿಷ್ಟ ಕೊಡುಗೆ ನೀಡುತ್ತಿದೆ. ವಿಶೇಷವಾಗಿ ಸಾರ್ವಕಾಲಿಕ ಮೌಲ್ಯಗಳುಳ್ಳ ಜಾಗತಿಕ ಸಾಹಿತ್ಯದಲ್ಲಿ ಅಪರೂಪದ ರಚನೆಗಳಾದ ವಚನ ಸಾಹಿತ್ಯವನ್ನು ೬೦-೭೦ರ ದಶಕಗಳಲ್ಲಿ ಬಹುಮಾಧ್ಯಮದಲ್ಲಿ ಮನೆಮನೆಗೆ ತಲುಪಿಸಿದ ಕೀರ್ತಿ ೨೦ನೆಯ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರದು.

ವಚನ ಸಾಹಿತ್ಯವನ್ನು ಪ್ರಪ್ರಥಮ ಬಾರಿಗೆ ಹಿಂದಿ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳಿಗೆ ಅನುವಾದ ಮಾಡಿಸಿ ಅನ್ಯ ಭಾಷಿಗರಿಗೆ ವಚನ ಸಾಹಿತ್ಯ ಕೈಗೆಟುಕುವಂತೆ ಮಾಡಿರುವುದು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಹೆಮ್ಮೆಯಾಗಿದೆ. ಹಾಗೆಯೇ ನಾಡಿನ ಹೆಸರಾಂತ ಲೇಖಕರ ಮೌಲ್ಯಯುತ ನೂರಾರು ಕೃತಿಗಳು ಬೃಹನ್ಮಠದಿಂದ ಪ್ರಕಾಶನಗೊಂಡಿವೆ ಎಂದು ಶ್ರೀಮಠ ಪ್ರಕಟಣೆಯಲ್ಲಿ ತಿಳಿಸಿದೆ.

೯೦ರ ದಶಕದಲ್ಲಿ ಭಾರತವು ಕಂಪ್ಯೂಟರ್ ತಂತ್ರಜ್ಞಾನದಲ್ಲಿ ಶೈಶವಾವಸ್ಥೆಯಲ್ಲಿತ್ತು. ಆಗಲೇ ಕ್ರಿಸ್ತ ಪೂರ್ವ ಕಾಲದ ವೈಯಾಕರಣಿ ಪಾಣಿನಿ ಮಹರ್ಷಿಯ ಅಷ್ಟಾಧ್ಯಾಯಿಸೂತ್ರ ರೂಪದ ಸಂಸ್ಕೃತ ವ್ಯಾಕರಣ ಗ್ರಂಥವನ್ನು ೧೯೯೪ರಲ್ಲಿ ತಂತ್ರಾಂಶ ರೂಪಿಸಿ ಜಗತ್ತಿನ ಸಂಸ್ಕೃತ ವಿದ್ವಾಂಸರ ಮುಂದೆ ಅನಾವರಣ ಮಾಡಿದ್ದು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು. ಮುಂದುವರಿದು ಶಿವಶರಣರ ಸಮಗ್ರ ವಚನ ಸಾಹಿತ್ಯಕ್ಕೂ ತಂತ್ರಾಂಶ ರೂಪಿಸಿ, ಜಗತ್ತಿನ ಜಿಜ್ಞಾಸುಗಳಿಗೆ ವಚನ ಸಾಹಿತ್ಯ ದೊರಕುವಂತೆ ಮಾಡಿದರು.

 ೨೧ನೆಯ ಶತಮಾನದ ಈ ಕಾಲಘಟ್ಟದಲ್ಲಿ ತಂತ್ರಜ್ಞಾನ ಎಲ್ಲೆಡೆ ವ್ಯಾಪಿಸಿಕೊಂಡಿದೆ. ಅದಕ್ಕೆ ತಕ್ಕಂತೆ ಶಿವಶರಣರ 99 ಸಾವಿರ ವಚನಗಳನ್ನು ಮೊಬೈಲ್ ತಂತ್ರಾಂಶದಲ್ಲಿ ಕೈಗೆಟುಕುವಂತೆ ಮಾಡಿರುವುದು ಪೂಜ್ಯರ ಕರ್ತೃತ್ವ ಶಕ್ತಿಗೆ ಹಿಡಿದ ಕನ್ನಡಿಯಾಗಿದೆ.

ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ೧೦ನೆಯ ವಿಶ್ವ ಸಂಸ್ಕೃತ ಸಮ್ಮೇಳನ, ‘ಬೆಳದಿಂಗಳ ಕವಿಗೋಷ್ಠಿ‘, ‘ಹಾಕ್ಕೋತ್ಸವತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಛಾಪು ಮೂಡಿಸಿದೆ. ಕಳೆದ ಅರ್ಧ ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದಲೂ ನಾಡಿನ ವಿವಿಧ ಭಾಗಗಳಲ್ಲಿ ಒಂಬತ್ತು ದಿನಗಳು ನಡೆಯುವ ತರಳಬಾಳು ಹುಣ್ಣಿಮೆಯು ನಾಡಿನ ಪ್ರಸಿದ್ಧ ವಿದ್ವಾಂಸರು, ಸಾಹಿತಿಗಳು, ಕಲಾವಿದರು ಭಾಗವಹಿಸಿ ತಮ್ಮ ವಿಚಾರಧಾರೆಗಳನ್ನು ಹಂಚಿಕೊಳ್ಳುವ ಬೃಹತ್ ವೇದಿಕೆಯಾಗಿದೆ.

ಪ್ರತಿವರ್ಷದಂತೆ ಈ ವರ್ಷವು ಚಿತ್ರದುರ್ಗ ತಾಲೂಕಿನ ಸಿರಿಗೆರೆಯಲ್ಲಿ ತರಳಬಾಳು ನುಡಿಹಬ್ಬದ ಮೂಲಕ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಪ್ರಚಾರ ಕಾರ್ಯದಲ್ಲಿ ಹೊಸ ಮೈಲಿಗಲ್ಲನ್ನು ರೂಪಿಸುತ್ತಿದೆ.

೨೦೨೪ರ ನವೆಂಬರ್ ೮, ೯ ಮತ್ತು ೧೦ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ತರಳಬಾಳು ನುಡಿಹಬ್ಬ- ೨೦೨೪ಹಮ್ಮಿಕೊಳ್ಳಲಾಗಿದೆ.

ಈ ನುಡಿಹಬ್ಬದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಮೂರು ದಿನಗಳ ಕಾಲ ವಿಚಾರ ಗೋಷ್ಠಿ, ಕವಿಗೋಷ್ಠಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ. ಇದರಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಕವಿಗಳು, ಕಲಾವಿದರು ಭಾಗವಹಿಸಲಿದ್ದಾರೆ.

 ಸರ್ವಜ್ಞ ಕವಿಯ ತ್ರಿಪದಿಗಳು ಮತ್ತು ಡಿವಿಜಿಯವರ ಮಂಕುತಿಮ್ಮನ ಕಗ್ಗದ ಮೊಬೈಲ್ ತಂತ್ರಾಂಶ (ಆಫ್) ವನ್ನು ಈ ನುಡಿಹಬ್ಬದಲ್ಲಿ ಪ್ರಸಿದ್ಧ ಕವಿ ಡಾ. ಪ್ರದೀಪ್ ಕುಮಾರ್ ಹೆಬ್ರಿಯವರು ಲೋಕಾರ್ಪಣೆ ಮಾಡಲಿದ್ದಾರೆ.

ಉದ್ಘಾಟನೆಯ ದಿನ ವಿವಿಧ ಜನಪದ ಕಲಾ ತಂಡಗಳೊಂದಿಗೆ ಮೆರವಣಿಗೆ, ಮಕ್ಕಳಿಂದ ಛದ್ಮವೇಶ, ನಾಲ್ಕು ಸಾವಿರ ವಿದ್ಯಾರ್ಥಿಗಳಿಂದ ನಾಡಗೀತೆಗಳ ಗಾಯನ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಪುಸ್ತಕಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಸಾಹಿತಿಗಳ ಪುಸ್ತಕಗಳು, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದ ಪುಸ್ತಕಗಳ ದರ್ಶನ ಏರ್ಪಡಿಸಲಾಗಿದೆ.

೨೦೨೪ರ ಮಾರ್ಚ್ ತಿಂಗಳಿನಲ್ಲಿ ನಡೆದ ಪಿ ಯು ಸಿ ಪರೀಕ್ಷೆಯ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದ ವಿದ್ಯಾಸಂಸ್ಥೆಯ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು.

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪಿಯು ಕಾಲೇಜು ಕನ್ನಡ ಶಿಕ್ಷಕರು, ಉಪನ್ಯಾಸಕರುಗಳಿಗೆ ಶಿಕ್ಷಣ ಇಲಾಖೆಯಿಂದ ಅನ್ಯಕಾರ್ಯ ನಿಮಿತ್ತ (ಓಓಡಿ) ಸೌಲಭ್ಯ ಕಲ್ಪಿಸಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ದಾವಣಗೆರೆ ಮತ್ತು ಚಿತ್ರದುರ್ಗ ನಗರಗಳಿಂದ ಬಸ್ ಸೌಲಭ್ಯ ಒದಗಿಸಲಾಗುತ್ತದೆ.

ವಿಶೇಷ ಟಿಪ್ಪಣಿ-
ನುಡಿಹಬ್ಬದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಮತ್ತು ಸಾರ್ವಜನಿಕರಿಗೆ ದಾವಣಗೆರೆ ಕನ್ನಡ ಭವನದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಭಾಗವಹಿಸುವವರು ನ.೭ ಗುರುವಾರ ಸಂಜೆ ೫ ಗಂಟೆಯೊಳಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಿ ದಿಳ್ಳಪ್ಪ (94492 46195) ಮತ್ತು ಜಗದೀಶ್ ಕೂಲಂಬಿ ( 94493 20703) ಹೆಸರನ್ನು ನೋಂದಾಯಿಸಿಕೊಳ್ಳಲಿ ಕೋರಲಾಗಿದೆ ಎಂದು ಶ್ರೀಮಠವು ತಿಳಿಸಿದೆ.

 

 

- Advertisement -  - Advertisement -  - Advertisement - 
Share This Article
error: Content is protected !!
";