ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ತರಗತಿಯ ಕೋಣೆಯಲ್ಲಿ ಐವತ್ತು ಮಕ್ಕಳಿದ್ದಾರೆ ಎಂದು ಇಟ್ಟುಕೊಂಡರೆ ಅವರನ್ನು 5 ತಂಡಗಳನ್ನಾಗಿ ರೂಪಿಸಿ ಅವರಿಗೆ ಪಠ್ಯದ 5 ಪರಿಚ್ಛೇದಗಳನ್ನು ನೀಡಿ ಅವುಗಳನ್ನ ಅವರು ಓದಿಕೊಂಡು ಅವರೇ ಪರಸ್ಪರರು ಪ್ರಶ್ನೆಗಳನ್ನು ತಯಾರಿಸಿ ತಂಡವಾರು ಪ್ರಶ್ನೆ ಕೇಳಿ ಉತ್ತರ ಪಡೆಯುವಂತಾಗಬೇಕು ಎಂದು ತರಳಬಾಳು ಸಿರಿಗೆರೆ ಪೀಠಾಧ್ಯಕ್ಷರಾದ ಡಾ.ಶಿವಮೂರ್ತಿ ಶಿವಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯ ಶ್ರೀಗುರು ಶಾಂತೇಶ್ವರ ದಾಸೋಹ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವಂತಹ ಶಿಕ್ಷಣ ವ್ಯವಸ್ಥೆ ಜಾರಿಗೊಳ್ಳಲಿ. ಪ್ರಶ್ನೆಗಳು ಅನ್ವಯಿಕ ಪ್ರಶ್ನೆಗಳ ರೂಪದಲ್ಲಿರಬೇಕು.
ಅದು ಅನ್ವಯಿಕ ಜ್ಞಾನವನ್ನು ಕಲಿಸುವಂತಿರಬೇಕು. ಆ ಪಠ್ಯಕ್ಕೆ ಕ್ರಿಷ್ಟಾಂಶಗಳಿಗೆ ಅಧ್ಯಾಪಕರು ಅನುಕೂಲಿಸುವಂಥವರಾಗಬೇಕೆ ಹೊರತು ಆ ಪಠ್ಯವನ್ನು ವಿವರಿಸುವಂತೆ ಆಗಬಾರದು.ಇಂತಹ ಬೋಧನಾ ವ್ಯವಸ್ಥೆ ನಮ್ಮಲ್ಲಿ ಜಾರಿಯಾಗಬೇಕೆಂದು ಸಲಹೆ ನೀಡಿದರು.
ನಾವು ವಿದೇಶಗಳಿಗೆ ಹೋದ ಹಲವು ಸಂದರ್ಭಗಳಲ್ಲಿ ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮನ್ನು ಪರಿಚಯಿಸಿಕೊಂಡು ಕೃತಜ್ಞತೆಯಿಂದ ಪ್ರಣಾಮಗಳನ್ನು ಸಲ್ಲಿಸುತ್ತಾರೆ.
ಇದು ನಮಗೆ ತುಂಬಾ ಸಂತೋಷ ತರುತ್ತಿದೆ. ನಮ್ಮ ವಿದ್ಯಾ ಸಂಸ್ಥೆಯ ಬೋಧಕರು ಬೋಧನೆಯಲ್ಲಿ ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿ. ಮುಂದೆ ನೀವು ಕಲಿಸಿದ ವಿದ್ಯಾರ್ಥಿಗಳು ನಿಮ್ಮನ್ನು ಸದಾ ಸ್ಮರಿಸುವಂತವರಾಗಬೇಕೆಂದರು.
ಕಾರ್ಯಕ್ರಮದಲ್ಲಿ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ವಿಶೇಷ ಅಧಿಕಾರಿ ವೀರಣ್ಣ ಜತ್ತಿ ಕಾರ್ಯಾಗಾರದ ವಿವರಣೆ ನೀಡಿದರು. ಶಿಕ್ಷಕ ಎಂ.ರಂಗಣ್ಣ ನಿರೂಪಿಸಿ ವಂದಿಸಿದರು.