ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಶಿಕ್ಷಕರು ವೃತ್ತಿ ಬದ್ಧತೆ ಬೆಳೆಸಿಕೊಂಡು ಕ್ರಿಯಾಶೀಲರಾಗಿ ಬೋಧಿಸಿದಾಗ ಮಕ್ಕಳ ಕಲಿಕೆ ಪರಿಣಾಮಕಾರಿಯಾಗುತ್ತದೆ ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ಹಿರಿಯೂರು ಪಟ್ಟಣದ ಗಿರೀಶ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ ಚಿತ್ರದುರ್ಗ ಡಯಟ್‌ನಲ್ಲಿ ಗುಣಮಟ್ಟದ ಶಿಕ್ಷಣ, ಶಿಕ್ಷಕರ ವೃತ್ತಿಪರ ಸಾಮರ್ಥ್ಯ ಅಭಿವೃದ್ಧಿಯಲ್ಲಿ ಡಯಟ್‌ನ ಪಾತ್ರ ವಿಷಯದ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿ,
ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು. ಮಕ್ಕಳಲ್ಲಿ ಸ್ಪಷ್ಟ ಓದು, ಶುದ್ಧ ಬರಹ, ಸಂಖ್ಯಾ ಜ್ಞಾನ ಸಾಮರ್ಥ್ಯ ಬೆಳೆಸುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದರು.
ಉಪನ್ಯಾಸಕ ಎಸ್,ಬಸವರಾಜು ಮಾತನಾಡಿ, ಶಿಕ್ಷಕರು ತರಗತಿ ನಿರ್ವಹಣೆಯಲ್ಲಿ ವಿದ್ಯಾರ್ಥಿ ಸ್ನೇಹಿ ಕಲಿಕಾ ವಾತಾವರಣ ಸೃಷ್ಟಿಸಿ ಮಾತೃಭಾವನೆಯಿಂದ ಬೋಧನೆ ಮಾಡಬೇಕು. ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಲು ಶಿಕ್ಷಕರಿಗೆ ಸಹಾನುಭೂತಿ, ಸಂವೇದನಾಶೀಲತೆ ಅಗತ್ಯವಾಗಿದ್ದು ಮಕ್ಕಳ ಮನಸ್ಥಿತಿ ಅರ್ಥೈಸಿಕೊಂಡು ಪೂರಕ ಚಟುವಟಿಕೆಗಳನ್ನು ಬಳಸಿ ಬೋಧಿಸುವುದರಿಂದ ಕಲಿಕಾ ಪ್ರಗತಿ ಆಗುತ್ತದೆ ಎಂದು ತಿಳಿಸಿದರು. ನಮ್ಮ ವೃತ್ತಿಯನ್ನು ಪ್ರೀತಿಸಬೇಕು.
ಪೂರ್ವ ಸಿದ್ಧತೆಯಿಂದ ತರಗತಿ ನಿರ್ವಹಣೆ ಮಾಡಬೇಕು. ಹೊಸ ಚಿಂತನೆಯೊಂದಿಗೆ ನಾವಿನ್ಯಯುತ ಚಟುವಟಿಕೆಗಳನ್ನು ಅಳವಡಿಸಿಕೊಂಡು ಪಠ್ಯ ವಿಷಯ ಬೋಧಿಸುವುದರ ಜತೆಗೆ ಜೀವನ ಮೌಲ್ಯ ಬೆಳೆಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.
ಉಪನ್ಯಾಸಕ ಯು.ಸಿದ್ದೇಶಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರನ್ನು ಅನಸರಣೆ ಮಾಡುವುದರಿಂದ ಮಾದರಿಯಾಗಿರಬೇಕು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗುರುತಿಸಿ, ಬುದ್ದಿಮಟ್ಟವನ್ನು ಅರಿತು ಬೋಧಿಸಬೇಕು. ಪಾಠ ಬೋಧನೆಯಲ್ಲಿ ತಂತ್ರಜ್ಞಾನ ಬಳಸಿಕೊಂಡು ಕಲಿಕೆಯನ್ನು ಅನುಕೂಲಿಸುವವರಾಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು ಎಂದರು.
ಶಿಕ್ಷಕರ ಶಿಕ್ಷಣ, ಪಠ್ಯಕ್ರಮ ಮತ್ತು ಮೌಲ್ಯಮಾಪನ, ಶೈಕ್ಷಣಿಕ ತಂತ್ರಜ್ಞಾನ, ಯೋಜನೆ ಮತ್ತು ನಿರ್ವಹಣೆ, ಜಿಲ್ಲಾ ಸಂಪನ್ಮೂಲ ಘಟಕ ವಿಭಾಗಗಳ ಕುರಿತು ಉಪನ್ಯಾಸಕರಾದ ಸಿ.ಎಸ್.ಲೀಲಾವತಿ, ವಿ.ಕನಕಮ್ಮ ಮಾಹಿತಿ ನೀಡಿದರು.
ಗಿರೀಶ ಬಿ.ಇಡಿ ಕಾಲೇಜಿನ ಉಪನ್ಯಾಸಕರಾದ ಡಿ.ವೇದಾ, ಎಸ್. ನಿಜಲಿಂಗಪ್ಪ, ಎಂ. ಲೋಕೇಶ್, ಪ್ರಮೋದ್, ನಾಗರಾಜು, ವನಿತ, ಮಂಜು ಮತ್ತು ಪ್ರಶಿಕ್ಷಣಾರ್ಥಿಗಳು ಇದ್ದರು.