ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಂತರರಾಷ್ಟ್ರೀಯ ಮಹಿಳಾ ದಿನ ಮಾರ್ಚ್-8ರ ಅಂಗವಾಗಿ ಲೇಖನ.
“ಹೆಣ್ಣು ಬದುಕಿನ ಶಕ್ತಿ ಸಾಧನೆಯ ಸಂಕೇತ”. ಆಕೆಯ ಗರ್ಭದ ಗೂಡೊಳಗೆ ಅವಿತು ಬಂದಿರುವೆನು ನಾನು ನನಗೆ ಪ್ರಪಂಚವ ಪರಿಚಯಿಸಿದವಳಾಕೆ……
ಆಕೆ ಕಷ್ಟದ ಕಾವಲಿಯ ಮೇಲೆ ಬೆಂದು ಬದುಕ ಕಟ್ಟಿಕೊಂಡವಳಾಕೆ…ಕರುಣೆಯ ಕಂಬನಿ ಯೊಳಗೆ ದೀಪವ ಬೆಳಗಿಸಿದವಳಾಕೆ ತನ್ನೆಲ್ಲಾ ಆಸೆಗಳ ಮಕ್ಕಳೊಳಗೆ ಕಂಡವಳಾಕೆ…..ಕರುಣಾಮಯಿ…… ನನ್ನ ತಾಯಿ….. ನಿನಗಿಂದು ಮಹಿಳೆಯ ದಿನಾಚರಣೆಯ ಶುಭಾಶಯಗಳು..
ಪ್ರಪಂಚದಲ್ಲಿ ಬಹುತೇಕ ವಿಚಾರಗಳಿಗೆ ಒಂದೊಂದು ದಿನ ಮೀಸಲಿಟ್ಟಿರುವಂತೆ ಮಹಿಳೆಯರಿಗೂ ಕೂಡ ಒಂದು ವಿಶೇಷ ದಿನವನ್ನು ನಿಗದಿಪಡಿಸಲಾಗಿದೆ. ಅದೇ ಜಗತಿನಾದ್ಯಂತ ಆಚರಣೆ ಮಾಡುವ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ.
ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ ಸೋದರಿಯಾಗಿ ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಪೊಲೀಸ್ ಆಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ, ಇನ್ನು ಮುಂತಾದ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕೆಲಸ ಕಾರ್ಯಗಳನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ. ಸಮಾಜದ ಅನೇಕ ಕಟ್ಟು ಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಹಾಗಾಗಿ ವಿಶ್ವದ್ಯಂತ ಮಹಿಳೆಯರಿಗಾಗಿ ಗೌರವಾನ್ವಿತವಾಗಿ ಈ ಒಂದು ದಿನವನ್ನು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುವ ಮೂಲಕ ಮೀಸಲಿಡಲಾಗಿದೆ.
ಸಮಾನತೆಯ ಜೊತೆಗೆ ಒಗ್ಗಟ್ಟಿನಲ್ಲಿಯೂ ಸಹ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರತಿ ವರ್ಷ ಮಾರ್ಚ್ 8ರಂದು ಅಂತರಾಷ್ಟ್ರೀಯ ಮಹಿಳೆಯರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ಮಹಿಳಾ ದಿನಾಚರಣೆಯ ಇತಿಹಾಸವನ್ನು ನಾವು ನೋಡುವುದಾದರೆ ಇಂದು ಮಹಿಳೆಯರ ಸಾಧನೆ ಎಲ್ಲಾ ಕ್ಷೇತ್ರಗಳಲ್ಲಿಯೂ ಇದೆ. ಮುಖ್ಯವಾಗಿ ತಾಂತ್ರಿಕ, ಸಂಶೋಧನಾ, ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿಯೂ ಮಹಿಳೆಯರು ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ಬುದ್ಧಿ ಶಕ್ತಿ . ಜಾಣ್ಮೆಯಿಂದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರಗಳನ್ನು ತಂದುಕೊಟ್ಟಿದ್ದಾರೆ.
ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ ಇಂದು ನೆನ್ನೆಯದಲ್ಲ. 1900ನೇ ಇಸವಿಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಹಾಗಿನ ಸಂದರ್ಭದಲ್ಲಿ ಉದ್ಯಮಗಳ ಅಭಿವೃದ್ಧಿ ದಾಪುಗಾಲಿನಲ್ಲಿ ಸಾಗುತ್ತಿತ್ತು. ಜೊತೆಗೆ ಜನಸಂಖ್ಯೆಯೂ ಕೂಡ ವೇಗವಾಗಿ ಹೆಚ್ಚಾಗುತ್ತಿದ್ದ ದಿನಗಳು ಅವುಗಳಾಗಿದ್ದವು.
ಮಹಿಳೆಯರ ದಿನದ ಪ್ರಾಮುಖ್ಯತೆಗೆ ಸಂಬಂಧಪಟ್ಟಂತೆ ಈ ಹಿಂದಿನ ಇತಿಹಾಸವನ್ನು ಕೆದಕುತ್ತ ಹೋದರೆ 1908ರ ಸಂದರ್ಭದಲ್ಲಿ ಮಹಿಳೆಯರಿಗೆ ಆಗುತ್ತಿದ್ದ ದೌರ್ಜನ್ಯಗಳು ಮತ್ತು ಅಸಮಾನತೆಯ ವಿರುದ್ಧ ಚರ್ಚೆಗಳು ಪ್ರಾರಂಭವಾದವು. ಬರೋಬ್ಬರಿ ಹದಿನೈದು ಸಾವಿರ ಮಹಿಳೆಯರು ಅಂದು ನಿಯರ್ ಸಿಟಿ ಪ್ರವೇಶಿಸಿ ತಮ್ಮ ಕೆಲಸದ ಅವಧಿಗಳನ್ನು ಕಡಿಮೆ ಮಾಡಬೇಕೆಂದು ಮತ್ತು ಸಂಬಳ ಹೆಚ್ಚಿಸಬೇಕು. ಜೊತೆಗೆ ನಮಗೆ ವೋಟ್ ಹಾಕುವ ಅಧಿಕಾರ ಕೊಡಬೇಕು ಎಂಬುದಾಗಿ ಹಲವಾರು ಬೇಡಿಕೆಗಳನ್ನು ತಮ್ಮ ಪ್ರತಿಭಟನೆಯ ಮೂಲಕ ಸರ್ಕಾರದ ಮುಂದಿಟ್ಟರು.
ಇದರ ನಂತರ 1909 ನೇ ಇಸವಿಯಲ್ಲಿ ಮೊದಲ ಮಹಿಳೆಯರ ದಿನವನ್ನು ಅಮೆರಿಕದಲ್ಲಿ ಆಚರಣೆಗೆ ತರಲಾಯಿತು. ಕಾಪನ್ಹಾಗನ್ ನಲ್ಲಿ ವೃತ್ತಿಪರ ಅಂತರಾಷ್ಟ್ರೀಯ ಮಹಿಳೆಯರ ಕಾನ್ಫರೆನ್ಸ್ ಏರ್ಪಡಿಸಲಾಯಿತು. ಅಲ್ಲಿ ಜರ್ಮನಿಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಯ ಮಹಿಳಾಕಚೇರಿಯ ಅಧ್ಯಕ್ಷರಾದ ಕ್ಲಾರಾ ಜೆಟ್ಕಿನ್ ಎನ್ನುವವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ತಮ್ಮ ಒಲವನ್ನು ವ್ಯಕ್ತಪಡಿಸಿದರು.
ಹೀಗಾಗಿ ಪ್ರಪ್ರಥಮ ಬಾರಿಗೆ 1911ರಲ್ಲಿ ಆಸ್ಟ್ರೀಯಾ. ಡೆನ್ಮಾರ್ಕ್. ಜರ್ಮನ್ ಮತ್ತು ಸ್ವಿಜರ್ಲ್ಯಾಂಡ್ ನಲ್ಲಿ ಮಾರ್ಚ್ 19 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಇದರ ನಂತರದಲ್ಲಿ 1913 ಮತ್ತು 1914ರ ನಡುವೆ ರಷ್ಯಾದಲ್ಲೂ ಮೊದಲ ಬಾರಿಗೆ ಮಹಿಳೆಯರ ದಿನವನ್ನು ಫೆಬ್ರವರಿ 23ರಂದು ಆಚರಿಸಲಾಯಿತು. ಅನಂತರ ಪ್ರತಿ ವರ್ಷ ಮಾರ್ಚ್8ಕ್ಕೆ ಮಹಿಳೆಯರ ದಿನಾಚರಣೆಯನ್ನು ವಿಶ್ವದ್ಯಂತ ಆಚರಣೆ ಮಾಡುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯುನೈಟೆಡ್ ನೇಶನ್ಸ್ ಕೂಡ 1975ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಣೆ ಮಾಡಿತು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಣ್ಣಗಳು: ಕೇವಲ ದ್ವಜಗಳಿಗೆ ಬಣ್ಣವಿರುವುದು ಮಾತ್ರವಲ್ಲ. ಈ ರೀತಿಯ ವಿಶೇಷವಾದ ದಿನಗಳಿಗೂ ಕೂಡ ಬಣ್ಣವಿರುತ್ತದೆ. ಎಂಬುದು ನಮಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ತಿಳಿದು ಬರುತ್ತದೆ. ಸಾಮಾನ್ಯವಾಗಿ ಈ ದಿನದಲ್ಲಿ ನೇರಳೆ, ಹಸಿರು ಹಾಗೂ ಬಿಳಿ ಬಣ್ಣವನ್ನು ಉಪಯೋಗಿಸಲಾಗುತ್ತದೆ. ನೇರಳೆ ಬಣ್ಣವು ನ್ಯಾಯ, ಘನತೆ ಮತ್ತು ನಿಷ್ಠೆಯನ್ನು ಸೂಚಿಸುತ್ತದೆ. ಹಸಿರು ಬಣ್ಣವು ಭರವಸೆ ಮತ್ತು ಬೆಳವಣಿಗೆಯನ್ನು ಸಂಕೇತಿಸುತ್ತದೆ. ಬಿಳಿ ಬಣ್ಣವು ಶುದ್ಧತೆಯನ್ನು ಪ್ರತಿನಿಧಿಸುತ್ತದೆ. ಈ ಬಣ್ಣಗಳು 1908ರಲ್ಲಿ ಯು,ಕೆ,ಯ ಮಹಿಳೆಯರ ಸಾಮಾಜಿಕ ಮತ್ತು ರಾಜಕೀಯ ಒಕ್ಕೂಟದಿಂದ ಹುಟ್ಟಿಕೊಂಡಿವೆ ಎಂದು ಹೇಳಲಾಗುತ್ತದೆ.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವುದೇ ಒಂದು ದೇಶಕ್ಕೆ ಅಥವಾ ಗುಂಪಿಗೆ ಅಥವಾ ಸಂಘಕ್ಕೆ ಸೀಮಿತವಾಗಿಲ್ಲ. ಇಡೀ ವಿಶ್ವದ್ಯಂತ ಇದನ್ನು ಆಚರಿಸುವುದರಿಂದ ಈ ದಿನಕ್ಕೆ ವಿಶೇಷವಾದ ಮಹತ್ವವಿದೆ.
” ಮಹಿಳೆ ದುರ್ಬಲಳಲ್ಲ, ಅವಳು ಶಕ್ತಿಯ ಸಂಕೇತ, ಆಕೆಗೆ ಗೌರವ ನೀಡಿ, ಸಮಾಜ ಬೆಳಗಿ.”
ಲೇಖನ:ಸಿ.ಚಂದ್ರಮ್ಮ , ಸಹ ಶಿಕ್ಷಕರು, ತಾಳೀಕಟ್ಟೆ.

