ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದ ರೈತರಿಗೆ ಬರೀ ಕಣ್ಣೀರು, ತೆಲಂಗಾಣರಾಜ್ಯಕ್ಕೆ 1.24 ಟಿಎಂಸಿ ನೀರು ಬಿಡುವ ಮೂಲಕ ರಾಜ್ಯ ಸರ್ಕಾರ ಪನ್ನೀರು ನೀಡಿದೆ ಎಂದು ಜೆಡಿಎಸ್ ಕಿಡಿಕಾರಿದೆ.
ರಾಜ್ಯದಲ್ಲಿ ಬೇಸಿಗೆ ಶುರುವಾಗಿದ್ದು, ಹಲವು ಜಿಲ್ಲೆಗಳಲ್ಲಿ ಹನಿ ನೀರಿಗೂ ಹಾಹಾಕಾರ ಎದ್ದಿದೆ. ವಿದ್ಯುತ್‌ವ್ಯತ್ಯಯದ ಜೊತೆಗೆ ಬೆಳೆಗಳಿಗೆ ನೀರಿಲ್ಲದೆ ರೈತರು ಕಣ್ಣೀರಿಡುತ್ತಿದ್ದಾರೆ ಎಂದು ಜೆಡಿಎಸ್ ಆತಂಕ ವ್ಯಕ್ತಪಡಿಸಿದೆ.
ಮನೆಗೆ ಮಾರಿ, ಪರರಿಗೆ ಉಪಕಾರಿ ಎನ್ನುವಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರ, ತೆಲಂಗಾಣ ರಾಜ್ಯಕ್ಕೆ ರಾತ್ರೋರಾತ್ರಿ ಕದ್ದು ಮುಚ್ಚಿ ನೀರು ಬಿಟ್ಟಿರುವುದು ಖಂಡನೀಯ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಡ್ಯಾಂನಿಂದ ತೆಲಂಗಾಣದ ಕೃಷ್ಣ ನದಿಗೆ 1.24 TMC ಯಷ್ಟು ನೀರು ಹರಿಸಲಾಗಿದೆ.
ನಮ್ಮ ರಾಜ್ಯದ ರೈತರ ಹಿತವನ್ನು ಬಲಿಕೊಟ್ಟು, ತೆಲಂಗಾಣದ ಕಾಂಗ್ರೆಸ್ ಸರ್ಕಾರದ ಹಿತವನ್ನು ಕಾಪಾಡಲು ಹೊರಟಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಗೆ ನಾಚಿಕೆಯಾಗಬೇಕು ಎಂದು ಜೆಡಿಎಸ್ ಹರಿಹಾಯ್ದಿದೆ.