ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ತಂತ್ರಜ್ಞಾನ ಹಾಗೂ ಪ್ರತಿಭೆ ಬೆಂಗಳೂರಿನ ಎರಡು ಆಧಾರಸ್ತಂಭಗಳು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್ ವೇರ್ ಟೆಕ್ನಾಲಜೀ ಪಾರ್ಕ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’28 ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಬೆಂಗಳೂರಿನ ಜನಸಂಖ್ಯೆಯಲ್ಲಿ 20 % ಮಂದಿ ಐಟಿ ವೃತ್ತಿಪರರು ಬೆಂಗಳೂರಿನ ಮೂಲ ಸೌಕರ್ಯ ಅಭಿವೃದ್ಧಿಗೆ 1.5 ಲಕ್ಷ ಕೋಟಿ ಮೊತ್ತದ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ತಿಳಿಸಿದರು.
ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಬೆಂಗಳೂರು ಟೆಕ್ ಸಮಿಟ್ 2025 ‘ಫ್ಯೂಚರೈಸ್‘ಗೆ ಚಾಲನೆ ನೀಡಿ ಮಾತನಾಡಿದ ಉಪ ಮುಖ್ಯಮಂತ್ರಿಗಳು, “ದೇಶದ ಐಟಿ ರಫ್ತಿನಲ್ಲಿ ಶೇ.40-45ರಷ್ಟು ಪಾಲು ಬೆಂಗಳೂರಿನದ್ದಾಗಿದೆ. ನಮ್ಮಲ್ಲಿ ಹೆಚ್ಚು ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್, ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಮಾನವ ಸಂಪನ್ಮೂಲ ಬೇರೆ ಎಲ್ಲೂ ಇಲ್ಲ.
ನಮ್ಮ ಸರ್ಕಾರ ಅನ್ವೇಷಣೆ, ತಂತ್ರಜ್ಞಾನ, ಬಂಡವಾಳ ಹೂಡಿಕೆ, ಪ್ರತಿಭೆಗೆ ಹೆಚ್ಚಿನ ಪೆÇ್ರೀತ್ಸಾಹ ನೀಡುತ್ತಾ ಬಂದಿದೆ. ನೀವು ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಆಗಮಿಸಿದ್ದೀರಿ, ನಿಮ್ಮ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹೀಗಾಗಿ ನಾವು ನಿಮಗೆ ಅತ್ಯುತ್ತಮ ಮೂಲ ಸೌಕರ್ಯ ಒದಗಿಸಲು ಮುಂದಾಗಿದ್ದೇವೆ” ಎಂದು ತಿಳಿಸಿದರು.
“ಫ್ಯೂಚರೈಸ್ ಎಂಬುದು ಕೇವಲ ಘೋಷವಾಕ್ಯವಲ್ಲ, ಇದು ಬದಲಾವಣೆ, ನಾಳಿನ ಭವಿಷ್ಯದ ಅಡಿಪಾಯ. ಇಂದು ನೀವು ನಮ್ಮ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಆಗಮಿಸಿರುವುದಕ್ಕೆ ನಮಗೆ ಹೆಮ್ಮೆ ಇದೆ. ಈ ಕಾರ್ಯಕ್ರಮದ ಯಶಸ್ಸಿನಲ್ಲಿ ನಮ್ಮ ರಾಜ್ಯದ ಯಶಸ್ಸು ಅಡಗಿದೆ. ನಾನು ಇಂದು ನಿಮ್ಮ ಮುಂದೆ ಕೇವಲ ಉಪಮುಖ್ಯಮಂತ್ರಿಯಾಗಿ ನಿಂತಿಲ್ಲ, ಎಲ್ಲ ಬಂಡವಾಳ ಹೂಡಿಕೆ, ನಿಮ್ಮ ಆಲೋಚನೆಗಳ ಧ್ವನಿಯಾಗಿ ನಿಂತಿದ್ದೇನೆ. ಕರ್ನಾಟಕದ ಮೂಲಕ ಜಾಗತಿಕ ಭವಿಯ್ ಭವಿಷ್ಯ ರೂಪಿಸಲು ನಾವಿಂದು ಇಲ್ಲಿ ಸೇರಿದ್ದೇವೆ” ಎಂದು ಡಿಸಿಎಂ ಅವರು ಹೇಳಿದರು.
“ರಾಜ್ಯದಲ್ಲಿ 1998ರಿಂದ ಈ ಐಟಿ ಸಮ್ಮೇಳನ ನಡೆದುಕೊಂಡು ಬರುತ್ತಿದ್ದು, ಈ ಸಮ್ಮೇಳನ ರಾಜ್ಯದ 28ನೇ ಐಟಿ ಕ್ಷೇತ್ರದ ಕಾರ್ಯಕ್ರಮವಾಗಿದೆ. ಬೆಂಗಳೂರು ಟೆಕ್ ಸಮಿಟ್ ಏಷ್ಯದ ಅತಿ ದೊಡ್ಡ ಟೆಕ್ ಸಮ್ಮೇಳನಗಳಲ್ಲಿ ಒಂದಾಗಿದೆ. ಇದರೊಂದಿಗೆ ಬೆಂಗಳೂರು ಜಾಗತಿಕ ಐಟಿ ರಾಜಧಾನಿಯಾಗುವತ್ತ ಸಾಗಲು ನೆರವಾಗಲಿದೆ.
ಮೊದಲ ಬಾರಿಗೆ ಬೆಂಗಳೂರು ಅರಮನೆ ಮೈದಾನದಿಂದ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಗೆ ಸ್ಥಳಾಂತರವಾಗಿದೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಈ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದೆ. ಈ ಸಮ್ಮೇಳನದಲ್ಲಿ 10 ಸಾವಿರ ನವೋದ್ಯಮಗಳು, 60 ಸಾವಿರ ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ” ಎಂದು ಡಿ.ಕೆ ಶಿವಕುಮಾರ್ ಹೇಳಿದರು.

