ನಿವೇಶನ-ಮನೆ ಉಳ್ಳವರೇ ಸರ್ಕಾರಿ ಭೂಮಿ ಒತ್ತವರಿ ಮಾಡಿದ್ದರೂ ನೋಟಿಸ್ಸಿಲ್ಲ…
ಮನೆ, ನಿವೇಶನ ಇಲ್ಲದ ನಿರಾಶ್ರಿತರಿಗೆ ನೋಟಿಸ್ ಜಾರಿ ಮಾಡಿದ ತಹಶೀಲ್ದಾರ್
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಮೀಸಲು ರಕ್ಷಿತ ಅರಣ್ಯ ಪ್ರದೇಶವಲ್ಲ, ಕಾಯ್ದಿಟ್ಟ ಮೀಸಲು ಅರಣ್ಯ ಜಮೀನೂ ಅಲ್ಲ, ಅರಣ್ಯ ಭೂಮಿ ಮೊದಲೇ ಅಲ್ಲ, ಸರ್ಕಾರದ ಪಾಳು ಬಿದ್ದಿರುವ ಹುಲ್ಲಬನ್ನಿ ಮಾದರಿಯ ಜಮೀನಿನಲ್ಲಿ ಗುಡಿಸಲು ಮತ್ತು ಶೆಡ್ ತೆರವುಗೊಳಿಸುವಂತೆ ಹಿರಿಯೂರು 28-08-2025ರಂದು ಒತ್ತುವರಿ ಮಾಡಿರುವ ಬಡ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ತಹಶೀಲ್ದಾರ್ ಅವರು ನೋಟಿಸ್ ಜಾರಿ ಮಾಡಿ ಭಯ ಹುಟ್ಟಿಸಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗಿದೆ.
ಹಿರಿಯೂರು ತಾಲೂಕಿನ ಬಿದರೆಕೆರೆ ಗ್ರಾಮದ ರಿಸನಂ-1ರಲ್ಲಿ 3.20 ಎಕರೆ ಜಮೀನು ಇದೆ. ಈ ಜಮೀನಿನಲ್ಲಿ ಸುಮಾರು 50-60 ಖಾಯಂ ಮನೆಗಳಿವೆ. ಸರ್ಕಾರ ಖಾತೆ ಕೊಟ್ಟಿದೆ.
ವಸತಿ ಯೋಜನೆ ಅಡಿ ಮಂಜೂರಾದ ಮನೆಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಕೆಲವರು ಅರ್ಧ ಎಕರೆಗಿಂತ ಹೆಚ್ಚು ಜಾಗ ಹಿಡಿದಿಟ್ಟುಕೊಂಡಿದ್ದಾರೆ. ದೊಡ್ಡ ದೊಡ್ಡ ಮನೆಗಳನ್ನೂ ನಿರ್ಮಿಸಿಕೊಂಡಿದ್ದಾರೆ. ಆದರೆ ಅವರ್ಯಾರಿಗೂ ನೋಟಿಸ್ ನೀಡದೆ ಕೇವಲ ಗುಡಿಸಲಿದ್ದ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಜೀವನ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವ ಅಸಹಾಯಕ ದುರ್ಬಲ ಕುಟುಂಬದ ವಿರುದ್ಧ ತಹಶೀಲ್ದಾರ್ ಅವರು ಏಕೆ ನೋಟಿಸ್ ನೀಡಿದರು ಎನ್ನುವುದಿಲ್ಲ ತಿಳಿದಿಲ್ಲ.
ಅವರು ಸ್ಥಳ ಪರಿಶೀಲನೆ ಮಾಡಿ ವಸ್ತುಸ್ಥಿತಿ ಅರಿತಿದ್ದರೆ ನೋಟಿಸ್ ಜಾರಿ ಮಾಡುತ್ತಿರಲಿಲ್ಲ. ಶೆಡ್ ತೆರವುಗೊಳಿಸಲು ಬ್ರಹ್ಮಾಸ್ತ್ರ (ನೋಟಿಸ್ ) ಏಕೆ ಎನ್ನುವ ಪ್ರಶ್ನೆ ಉದ್ಭವಿಸಿದೆ.
ಒಂದು ವೇಳೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಎಲ್ಲರಿಗೂ ಒಂದೇ ಕಾನೂನು ಅಲ್ಲವೇ?, ಶೆಡ್ ನಿರ್ಮಿಸಿಕೊಂಡವರಿಗೆ ಬೇರೆ ಕಾನೂನು?, ಖಾಯಂ ಮನೆ ನಿರ್ಮಿಸಿಕೊಂಡವರಿಗೆ ಬೇರೆ ಕಾನೂನು ಇದೆಯಾ?, ಇದ್ದರೆ ಕಂದಾಯ ಇಲಾಖೆ ವತಿಯಿಂದ ನೋಟಿಸ್ ನೀಡಿರುವ ತಹಶೀಲ್ದಾರ್ ಅವರೇ ಹೇಳಬೇಕಾಗಿದೆ.
ಹಾಗೆಂದು ಒತ್ತುವರಿದಾರರಿಗೆ ಬೆಂಬಲ ಎಂದಲ್ಲ, ಶೆಡ್ ಮತ್ತು ಗುಡಿಸಲು ಇರುವ ಜಾಗ ತೆರವಿಗೆ ನೋಟಿಸ್ ನೀಡಿರುವ ಚಂದ್ರಹಾಸ ತಂದೆ ಬೇಲಪ್ಪ, ರಾಜಪ್ಪ ತಂದೆ ಕೋಡಪ್ಪ ಇವರಿಬ್ಬರೂ ನಿವೇಶನ ಆಗಲಿ, ಮನೆಯಾಗಲಿ ಇಲ್ಲವೇ ಇಲ್ಲ. ಜೊತೆಗೆ ಮಂಗಳಮ್ಮ ಚಂದ್ರಣ್ಣ ಎನ್ನುವವರಿಗೆ ಮನೆ ಇದ್ದು ಶಿಥಿಲಾವಸ್ಥೆಯಲ್ಲಿದೆ. ಇನ್ನೂ ಅನಿತಾ ಬಿನ್ ಹನುಮಂತಪ್ಪ ಎನ್ನುವರಿಗೆ ನಿವೇಶನ ಆಗಲಿ, ಮನೆಯಾಗಲಿ ಇಲ್ಲವೇ ಇಲ್ಲ. ಇಂಥಹ ಅಸಹಾಯಕ ದುರ್ಬಲ ವರ್ಗದವರಿಗೆ ನಿವೇಶನ, ಮನೆ ರಹಿತ ಕುಟುಂಬಗಳನ್ನು ಏಕೆ ಒಕ್ಕಲೆಬ್ಬಿಸಬೇಕು ಎನ್ನುವುದು ಪ್ರಶ್ನೆಯಾಗಿದೆ?.

ಲ್ಯಾಂಡ್ ಬೀಟ್ ವ್ಯವಸ್ಥೆ:
ಭೂಮಿ ಒತ್ತುವರಿ ತಡೆಯಲು ಮತ್ತು ಸರ್ಕಾರಿ ಭೂಮಿಯ ಮಾಹಿತಿಯನ್ನು ಸಂಗ್ರಹಿಸಲು ಈ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರ್ಕಾರಿ ಭೂಮಿ ಒತ್ತುವರಿ ತಡೆಯಲು ಮತ್ತು ತೆರವುಗೊಳಿಸಲು ಸರ್ಕಾರವು “ಲ್ಯಾಂಡ್ ಬೀಟ್” ಎಂಬ ಹೊಸ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿರುವ ಮತ್ತು ನಮೂನೆ -57 ಅರ್ಜಿ ಬಾಕಿ ಇರುವ ಪ್ರಕರಣಗಳನ್ನು ಈ ವ್ಯವಸ್ಥೆಯಿಂದ ಹೊರಗಿಡಲಾಗಿದೆ.
ಅಷ್ಟೇ ಅಲ್ಲದೆ ಅನಧಿಕೃತ ಸಾಗುವಳಿ ಮತ್ತು ವಾಸದ ಮನೆ ಇರುವ ಪ್ರಕರಣಗಳಲ್ಲಿ ಜನರಿಗೆ ಯಾವುದೇ ಕಿರುಕುಳ, ತೊಂದರೆ ಆಗದಂತೆ ಕ್ರಮ ವಹಿಸಲು ಎಲ್ಲ ತಹಶೀಲ್ದಾರ್‌ಗಳಿಗೆ ಕಂದಾಯ ಇಲಾಖೆ ನಿರ್ದೇಶನ ನೀಡಿದ್ದರೂ ತಹಶೀಲ್ದಾರ್ ಏಕೆ ನೋಟಿಸ್ ನೀಡಿದರೂ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ತಹಶೀಲ್ದಾರ್ ಅವರು ಯಾರೋ ಮಾತು ಕೇಳಿಕೊಂಡು ಈ ರೀತಿಯ ಏಕ ಪಕ್ಷೀಯ ತೀರ್ಮಾನ ಮಾಡಿ ನೋಟಿಸ್ ನೀಡಿದಂತೆ ಕಾಣುತ್ತಿದೆ.
ಜೀವನದ ಭದ್ರತೆಗಾಗಿ ಎರಡು ಮೂರು ಗುಂಟೆ ಭೂಮಿ ಒತ್ತುವರಿ ಮಾಡಿ ಶೆಡ್ ನಿರ್ಮಿಸಿಕೊಳ್ಳುತ್ತಿರುವವರ್ಯಾರು ಉಳ್ಳವರಲ್ಲ ಎನ್ನುವುದು ಅತಿ ಮುಖ್ಯ ಸಂಗತಿ.
ಮನೆ ನಿವೇಶನ ಸಿಗದ ದುರ್ಬಲರು:
ದುರ್ಬಲರಿಗೆ ನಿವೇಶನ, ಮನೆ ನಿರ್ಮಿಸಿ ಕೊಡಲು ಸಾಕಷ್ಟು ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದ್ದರೂ ಕೂಡ ನಿವೇಶನ ರಹಿತರನ್ನು ಗುರುತಿಸಿ ಒಂದು ಮನೆ ನಿರ್ಮಿಸಿ ಕೊಡದಿರುವುದು ಜಿಡ್ಡುಗಟ್ಟಿದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ.
ಮುಖ್ಯ ಮಂತ್ರಿಗಳ ಗ್ರಾಮೀಣ ನಿವೇಶನ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ ಮತ್ತು ನಗರ), ದೇವರಾಜ್ ಅರಸು ವಸತಿ ಯೋಜನೆ (ಗ್ರಾಮೀಣ ಮತ್ತು ನಗರ), ಡಾ. ಬಿ.ಆರ್ ಅಂಬೇಡ್ಕರ್ ನಿವಾಸ್ ಯೋಜನೆ, ಬಸವ ವಸತಿ ಯೋಜನೆಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರು ಮನೆ ನಿರ್ಮಿಸಿಕೊಳ್ಳುವ ಕನಸು ಈಡೇರಿಸಿಕೊಳ್ಳಲು ಅವಕಾಶ ಇದ್ದರೂ ಇವರ ಪಾಲಿಗೆ ಯಾವುದೇ ಯೋಜನೆಗಳಿಂದಲೂ ಒಂದು ಗೂಡು ನಿರ್ಮಿಸಿಕೊಳ್ಳಲು ಸಾಧ್ಯವಾಗದಿರುವುದು ವಿಪರ್ಯಾಸ.
ಈ ಎಲ್ಲಾ ಯೋಜನೆಗಳ ಮೂಲಕ ವಸತಿ ರಹಿತರಿಗೆ ಮನೆಯನ್ನು ನಿರ್ಮಿಸಿಕೊಡುವುದರ ಮೂಲಕ ʼಸರ್ವರಿಗೂ ಸೂರುʼ ಒದಗಿಸುವುದು ಸರ್ಕಾರದ ಉದ್ದೇಶವಗಿದೆ. ಆದರೂ ನಿವೇಶನ, ಮನೆ ರಹಿತ ಕುಟುಂಬಗಳ ಗುರುತಿಸದಿರುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
“ಸರ್ಕಾರದಿಂದ ಮಂಜೂರಾದ 30-40 ಮನೆಗಳನ್ನು ಗ್ರಾಮದ ರಿಸನಂ-1ರಲ್ಲಿ ಕಟ್ಟಲಾಗಿದೆ. ಈ ಎಲ್ಲ ಮನೆಗಳಿಗೆ ಖಾತೆ ನೀಡಲಾಗಿದೆ. ಹಕ್ಕು ಪತ್ರ ನೀಡಲಾಗಿದೆ. ರಾಜಣ್ಣ, ಚಂದ್ರಹಾಸ, ಅನಿತಾ ಇವರುಗಳಿಗೆ ಗ್ರಾಮದಲ್ಲಿ ಯಾವುದೇ ನಿವೇಶನ, ಮನೆ ಇಲ್ಲ. ಇವರು ಜೀವನ ಕಟ್ಟಿಕೊಳ್ಳಲು ಈಗ ಶೆಡ್ ನಿರ್ಮಿಸಿಕೊಳ್ಳುವ ಯತ್ನದಲ್ಲಿರುವಾಗಲೇ ಅಡ್ಡಿ ಆತಂಕಗಳು ಎದುರಾಗಿರುವುದು ವಿಪರ್ಯಾಸ. ಗ್ರಾಮದಲ್ಲಿ ಕೂಡಿ ಬಾಳುವಂತಿದ್ದ ವಾತಾವರಣ ಈಗ ಕಲುಷಿತವಾಗುತ್ತಿರುವುದು ಬೇಸರದ ಸಂಗತಿ. ಅಲ್ಲದೆ ಇದೇ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವ ಕೆಲವರಿಗೆ ಮನೆ, ನಿವೇಶನ ಇದೆ. ಆದರೆ ನಿವೇಶನ ಮನೆ ಇಲ್ಲದವರು ಶೆಡ್ ನಿರ್ಮಿಸಿಕೊಂಡರೆ ತಪ್ಪೇನು. ತಾಲೂಕು ಮತ್ತು ಜಿಲ್ಲಾಡಳಿತ ನಿವೇಶನ ರಹಿತ ಕುಟುಂಬಗಳಿಗೆ ಗ್ರಾಮದ ರಿಸನಂ-1ರಲ್ಲಿ ನಿವೇಶನ ನೀಡಿ ಮನೆಗಳನ್ನು ನಿರ್ಮಿಸಿಕೊಡಬೇಕು”.
ಎ.ಚಿಕ್ಕಣ್ಣ, ಗ್ರಾಮದ ಮುಖಂಡ, ಬಿದರೆಕೆರೆ, ಹಿರಿಯೂರು ತಾಲೂಕು.
“ನಮಗೆ ಗುಡಿಸಲು ನಿರ್ಮಿಸಿಕೊಳ್ಳಲು, ಮನೆ ನಿರ್ಮಿಸಿಕೊಳ್ಳಲು ತೊಂದರೆ ನೀಡುತ್ತಿರುವವರಿಗೆ ಊರಲ್ಲಿ ಮನೆ, ನಿವೇಶನ ಇದೆ. ಮತ್ತೆ ಇದೇ ಜಾಗದಲ್ಲೂ ನಿವೇಶನ ಪಡೆದಿರುತ್ತಾರೆ. ನಮ್ಮ ಮಕ್ಕಳು ಚಿಕ್ಕವರು, ನಮಗೆ ಯಾವುದೇ ನಿವೇಶನವಿಲ್ಲ, ಮನೆ ಇಲ್ಲ. ಈಗ ನಮಗೆ ಅಡ್ಡಿ ಮಾಡುತ್ತಿರುವ ಕೆಲವರು ಇದೇ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುತ್ತಾರೆ. ನಮಗೆ ನಿವೇಶನ, ಮನೆ ಇಲ್ಲದಿರುವುದರಿಂದ ಜೀವನ ಮಾಡಲು ತುಂಬಾ ತೊಂದರೆಯಾಗಿದ್ದು ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಜರುಗಿಸಿ ಮನೆ ನಿರ್ಮಿಸಿಕೊಳ್ಳಲು ಅವಕಾಶ ನೀಡಬೇಕು”.
ಬಿ.ಚಂದ್ರಹಾಸ, ಕೆ.ರಾಜಣ್ಣ, ಅನಿತಾ, ಮನೆ, ನಿವೇಶನ ಇಲ್ಲದ ನಿರಾಶ್ರಿತರು.
“ನಿವೇಶನ, ಮನೆ ಇದ್ದವರೂ ಹೆಚ್ಚಿನ ಜಾಗ ಅತಿಕ್ರಮ ಮಾಡಿಕೊಂಡಿರುವುದು ನಮ್ಮ ಗಮನಕ್ಕೆ ಬಂದಿದೆ. ಕಾನೂನು ಎಲ್ಲರಿಗೂ ಒಂದೇ. ನಿವೇಶನ ಇಲ್ಲದವರಿಗೆ ನೋಟಿಸ್ ಜಾರಿ ಆಗಿದ್ದರೆ ಆ ನೋಟಿಸ್ ಗೆ ಅವರಿಂದ ಉತ್ತರ ಬಂದ ಮೇಲೆ ಸೂಕ್ತ ನಿರ್ಧಾರ ಮಾಡಲಾಗುತ್ತದೆ”.
ಎಂ.ಸಿದ್ದೇಶ್, ತಹಶೀಲ್ದಾರ್, ಹಿರಿಯೂರು.

