ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಟೆಕ್ಕಿಯೊಬ್ಬ ತನ್ನ ಪ್ರಿಯತಮೆಯನ್ನು ಹೊಟೇಲ್ ಒಂದಕ್ಕೆ ಕರೆಯಿಸಿ, ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರದ ಪೂರ್ಣ ಪ್ರಜ್ಞಾ ಲೇಔಟ್ ನಲ್ಲಿ ನಡೆದಿದೆ.
ಕಳೆದ ಎರಡು ತಿಂಗಳುಗಳಿಂದ ಪ್ರಿಯತಮೆ ಮಾತನಾಡದೆ ಅಂತರ ಕಾಯ್ದುಕೊಂಡಿದ್ದರಿಂದ ರೊಚ್ಚಿಗೆದ್ದ ಟೆಕ್ಕಿ ಈ ಕೃತ್ಯ ಎಸಗಿದ್ದಾನೆ. ಹೋಟೆಲ್ ನ ಕೊಠಡಿಯೊಂದರಲ್ಲಿ 36 ವರ್ಷದ ಯುವತಿಯ ಕೊಲೆಯಾಗಿದೆ. ಘಟನೆ ನಡೆದ ಎರಡು ದಿನಗಳ ನಂತರ ಯುವತಿ ಹರಿಣಿ ಶವ ಪತ್ತೆಯಾಗಿದೆ.
ಆರೋಪಿ ಯಶಸ್(25) ಟೆಕ್ಕಿಯಾಗಿದ್ದು ಶುಕ್ರವಾರ ರಾತ್ರಿ OYO ಹೋಟೆಲ್ ನಲ್ಲಿ ಹರಿಣಿ ಹತ್ಯೆ ಮಾಡಿದ್ದಾನೆ. ಇವರಿಬ್ಬರು ಕೆಂಗೇರಿ ನಿವಾಸಿಗಳು ಎಂಬುದು ತಿಳಿದು ಬಂದಿದೆ.
ಕೆಲ ವರ್ಷಗಳಿಂದ ಇಬ್ಬರಿಗೂ ಪರಸ್ಪರ ಸ್ನೇಹ, ಸಲುಗೆ ಇತ್ತು. ಕಳೆದ ಎರಡು ತಿಂಗಳಿಂದ ಹರಿಣಿ ಮಾತನಾಡದೆ ಟೆಕ್ಕಿಯಿಂದ ಅಂತರ ಕಾಯ್ದುಕೊಂಡಿದ್ದಳು. ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಟೆಕ್ಕಿ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ ಎಂದು ದಕ್ಷಿಣ ಡಿಸಿಪಿ ಲೋಕೇಶ್ ಜಗಲಾಸರ್ ಮಾಹಿತಿ ನೀಡಿದರು.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ ನಂತರ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.