ಚಿತ್ರದುರ್ಗ-ದಾವಣಗೆರೆ ರಸ್ತೆಯ ರೈಲ್ವೆ ಗೇಟ್‍ಗೆ ಒಂದು ವಾರದೊಳಗೆ ಟೆಂಡರ್- ಸಚಿವ ಸೋಮಣ್ಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಿಂದ ದಾವಣಗೆರೆಗೆ ತೆರಳುವ ರಸ್ತೆ ಮಾರ್ಗ ಅಂದರೆ ಚಿತ್ರದುರ್ಗದ ರೈಲ್ವೆ ಸ್ಟೇಷನ್ ಹತ್ತಿರದ ರೈಲ್ವೆ ಗೇಟ್‍ಗೆ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಒಂದು ವಾರದ ಒಳಗಾಗಿ ಟೆಂಡರ್ ಕರೆಯಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅಧಿಕಾರಿಗಳಿಗೆ ತಾಕೀತು ಮಾಡಿದರು.

      ನಗರದ ರೈಲ್ವೆ ನಿಲ್ದಾಣ ಬಳಿ ಇರುವ ಚಿತ್ರದುರ್ಗ-ದಾವಣಗೆರೆ ಮಾರ್ಗದ ರಸ್ತೆಗೆ ಅಡ್ಡಲಾಗಿರುವ ರೈಲ್ವೆ ಗೇಟ್ ಸ್ಥಳಕ್ಕೆ ಶನಿವಾರದಂದು ಭೇಟಿ ನೀಡಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಈ ರೈಲ್ವೆ ಗೇಟ್ ಸಂಖ್ಯೆ 22 ರಿಂದ ಸಾರ್ವಜನಿಕರಿಗೆ, ವಾಹನ ಸಂಚಾರಕ್ಕೆ ಉಂಟಾಗುತ್ತಿರುವ ತೀವ್ರ ತೊಂದರೆಗಳ ಬಗ್ಗೆ ಸಂಸದ ಗೋವಿಂದ ಕಾರಜೋಳ ಅವರು ಮನವರಿಕೆ ಮಾಡಿಕೊಟ್ಟರು.  

ದಿನಕ್ಕೆ ಕನಿಷ್ಟ 30 ಬಾರಿ ರೈಲ್ವೆ ಗೇಟ್ ಬಂದ್ ಮಾಡುವುದರಿಂದ, ಹಲವು ಬಾರಿ ಆ್ಯಂಬುಲೆನ್ಸ್‍ಗಳು, ಪ್ರಯಾಣಿಕರ ಬಸ್‍ಗಳು, ವಾಹನ ಸವಾರರು ಅಸಹನೀಯ ತೊಂದರೆ ಅನುಭವಿಸುತ್ತಿದ್ದಾರೆ.  ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.  ಸ್ಥಳದಲ್ಲಿ ಉಪಸ್ಥಿತರಿದ್ದ ರೈಲ್ವೆಯ ಉಪ ಮುಖ್ಯ ಇಂಜಿನಿಯರ್ ನಿಂಗಪ್ಪ ಅವರನ್ನು ರೈಲ್ವೆ ಸಚಿವ ವಿ. ಸೋಮಣ್ಣ ಅವರು ತೀವ್ರ ತರಾಟೆಗೆ ತೆಗೆದುಕೊಂಡು,

ಈ ರೈಲ್ವೆ ಗೇಟ್‍ನ ಸಮಸ್ಯೆ ಪರಿಹರಿಸಲು ಈ ಹಿಂದೆಯೇ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಅನುದಾನವನ್ನೂ ಕೂಡ ಒದಗಿಸಲಾಗಿದೆ.  ಆದರೆ ನೀವು ಯಾವುದೇ ಕ್ರಮ ಕೈಗೊಳ್ಳದೆ ಕಾಲಹರಣ ಮಾಡುತ್ತಿದ್ದೀರ, ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಅಧಿಕಾರಿಗಳಿಗೆ ಬದ್ಧತೆ ಇರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿ, ಒಂದು ವಾರದ ಒಳಗಾಗಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಬೇಕು, ತಪ್ಪಿದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.  ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್ ಅವರು ಮಾತನಾಡಿ, ಈ ಮಾರ್ಗದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

      ಬಳಿಕ ನಗರದ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ವಿ. ಸೋಮಣ್ಣ ಅವರು, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲ್ವೆ ಮಾರ್ಗದ ಕಾಮಗಾರಿ ಕೈಗೊಳ್ಳುವ ಸಂದರ್ಭದಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾಗುವ ರೈಲ್ವೆ ಲೈನ್‍ಗಳ ಬಗ್ಗೆ ಹಾಗೂ ಚಿತ್ರದುರ್ಗದ ರೈಲ್ವೆ ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಅಭಿವೃದ್ದಿಪಡಿಸಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

      ಸಂಸದ ಗೋವಿಂದ ಎಂ. ಕಾರಜೋಳ, ರೈಲ್ವೆ ಇಲಾಖೆ ಮುಖ್ಯ ಆಡಳಿತಾಧಿಕಾರಿ (ನಿರ್ಮಾಣ) ಅಜಯ್ ಶರ್ಮಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಜಿಎಂ) ಮುದಿತ್ ಮಿತ್ತಲ್, ದಾವಣಗೆರೆ-ಚಿತ್ರದುರ್ಗ-ತುಮಕೂರು ರೈಲ್ವೆ ಮಾರ್ಗದ ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್ ನಾಯಕ್ ಸೇರಿದಂತೆ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

 

- Advertisement - 
Share This Article
error: Content is protected !!
";