ಭೀಕರ ಕಾರು ಅಪಘಾತ 6ಮಂದಿ ಸಾವು : ಅಪಘಾತ ಸ್ಥಳಕ್ಕೆ ಗೃಹ ಸಚಿವರ ಭೇಟಿ

News Desk

ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಧುಗಿರಿ ತಾಲ್ಲೂಕಿನ ಕಾಟಗಾನಹಟ್ಟಿ ಮತ್ತು ಕೆರೆಗಳಪಾಳ್ಯ ಸಮೀಪ ಭಾನುವಾರ ಸಂಜೆ ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ೬ ಜನ ಸಾವನ್ನಪ್ಪಿದ್ದಾರೆ.

ಪಾವಗಡ ತಾಲೂಕಿನ ಎತ್ತಿನಹಳ್ಳಿ ಗ್ರಾಮದ ಜನಾರ್ದನ ರೆಡ್ಡಿ(60), ಸಿಂಧೂ (33), ವೇದಾಸ್ ರೆಡ್ಡಿ(12), ಆನಂದ್(30), ಕಾರೇನಹಳ್ಳಿ ಗ್ರಾಮದ ನಾಗರಾಜ್ (33), ಹಾಗೂ ಸಿದ್ದಗಂಗಾ(35) ಮೃತ ದುರ್ದೈವಿಗಳಾಗಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ.ಪರಮೇಶ್ವರ ಅವರಿಂದು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಮಧುಗಿರಿ ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿ, ಮೃತಪಟ್ಟವರ ಹಾಗೂ ಗಾಯಾಳುಗಳ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಧೈರ್ಯ ತೆಗೆದುಕೊಳ್ಳುವಂತೆ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಸ್ತೆ ನೇರವಾಗಿದ್ದರೂ ಸಹ ಅಪಘಾತ ಸಂಭವಿಸಿರುವುದು ಅಚ್ಚರಿ ಮೂಡಿಸಿದೆ. ಘಟನಾ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್, ಐಜಿಪಿ ಲಾಭು ರಾಮ್ ಅವರು ಆಗಮಿಸಿದ್ದು, ಘಟನೆಗೆ ನಿಖರವಾದ ಕಾರಣವೇನು? ಇಂತಹ ಘಟನೆಗಳು ಮರುಕಳಿಸದಂತೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಹೇಳಿದರು.

 ರಾಜ್ಯದಲ್ಲಿ ಅಪಘಾತ ನಿಯಂತ್ರಿಸಲು ಇಲಾಖೆಯ ಅನುದಾನವನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೈಸೂರು ಹೆದ್ದಾರಿಯಲ್ಲಿ ಕಳೆದ ವರ್ಷ, ೪ ತಿಂಗಳ ಅವಧಿಯಲ್ಲಿ ೧೦೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು. ಅಪಘಾತ ವಲಯಗಳನ್ನು ಗುರುತಿಸಿ  ಪ್ರತಿಬಿಂಬಕ, ಸೂಚನಾ ಫಲಕ, ಮಾರ್ಗ ಸೂಚನಾ ಫಲಕಗಳನ್ನು ಅಳವಡಿಸುವುದರ ಜೊತೆಗೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಅಪಘಾತ ಸಂಖ್ಯೆ ಇಳಿಕೆಯಾಗಿದೆ. ರಸ್ತೆ ಸುರಕ್ಷತಾ ಕ್ರಮಕೈಗೊಳ್ಳಲು ನೂರು ಕೋಟಿ ರೂ. ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ವಾಹನ ಚಾಲಕರು ಅತಿಯಾದ ವೇಗದಲ್ಲಿ ವಾಹನ ಚಾಲನೆ ಮಾಡದಂತೆ, ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ತಿಳುವಳಿಕೆ ನೀಡಲಾಗುತ್ತಿದೆ. ಅತೀಯಾದ ವೇಗದಲ್ಲಿ ವಾಹನ ಚಾಲನೆ ಮಾಡುವ ಚಾಲಕರ ಪರವಾನಗಿಯನ್ನು ರದ್ದು ಮಾಡಲು ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರಲ್ಲದೆ,

  ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ೮೦ ಕಿ.ಮೀ. ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಡುವವರ ಮೇಲೆ ನಿಗಾ ವಹಿಸಲು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅತಿಯಾದ ವೇಗದಲ್ಲಿ ಚಾಲನೆ ಮಾಡುವವರನ್ನು ಗುರುತಿಸಿ ತಕ್ಷಣವೇ ದಂಡ ವಿಧಿಸಲಾಗುತ್ತಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ  ಮತ್ತು ರಾಜ್ಯ ಹೆದ್ದಾರಿಗಳಲ್ಲೂ  ಕ್ಯಾಮರಾಗಳನ್ನು ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮರಿಯಪ್ಪ ಅವರು ಇದ್ದರು.

 

 

- Advertisement -  - Advertisement -  - Advertisement - 
Share This Article
error: Content is protected !!
";