ಫೆ.03 ರಂದು ತೇರು ಮಲ್ಲೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

News Desk
- Advertisement -  - Advertisement -  - Advertisement - 

ಶಿವನಿಗೆ ಮುಡಿಪಾದ ಧಾರ್ಮಿಕ ಕೇಂದ್ರ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ
ಎಂ.ಎಲ್.ಗಿರಿಧರ
, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧ ಪಡೆದಿರುವ ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವವು ಫೆಬ್ರವರಿ 03 ರಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಕಳೆದ ಜನವರಿ 24 ರಿಂದ ಕಂಕಣೋತ್ಸವ ಕಾರ್ಯಕ್ರಮದೊಂದಿಗೆ ತೇರುಮಲ್ಲೇಶ್ವರ ಜಾತ್ರಾ ಮಹೋತ್ಸವ ಆರಂಭವಾಗಿದೆ.
ಈಗಾಗಲೇ ಗಿಳಿ ವಾಹನೋತ್ಸವ, ಗಂಡುಬೇರುಂಡ ವಾಹನೋತ್ಸವ, ನವಿಲು ವಾಹನೋತ್ಸವ, ಸಿಂಹ ವಾಹನೋತ್ಸವ, ನಂದಿ ವಾಹನೋತ್ಸವ, ಸರ್ಪ ವಾಹನೋತ್ಸವ, ಅಶ್ವವಾಹನೋತ್ಸವ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿವೆ.

 ಫೆ.02 ರಂದು ಸೋಮವಾರ ಬಸವ ವಾಹನೋತ್ಸವ ದೊಡ್ಡ ಉತ್ಸವ ಅಂದರೆ ಅಕ್ಕಿ ತಂಬಿಟ್ಟಿನ ಆರತಿ ಕಾರ್ಯಕ್ರಮವು ಬೆಳಿಗ್ಗೆಯಿಂದ ರಾತ್ರಿ ತನಕ ನಡೆಯಲಿದೆ.
ಫೆಬ್ರವರಿ 03 ರಂದು ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಇದು ತೇರುಮಲ್ಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಪ್ರಮುಖ ಘಟ್ಟವಾಗಿದೆ.

- Advertisement - 

ತೇರು ಮಲ್ಲೇಶ್ವರ ದೇವಾಲಯದಿಂದ ಹಿರಿಯೂರು ಸಾಕಷ್ಟು ಪ್ರಸಿದ್ಧಿಗಳಿಸಿದ್ದು ಅಪಾರ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸುತ್ತದೆ.
ವಿಶೇಷತೆ: ಶಿವನಿಗೆ ಮುಡುಪಾದ ಹಾಗೂ ತಾಲೂಕು ಕೇಂದ್ರದ ಅತಿ ಪ್ರಮುಖ ಧಾರ್ಮಿಕ ಕೇಂದ್ರ ತೇರು ಮಲ್ಲೇಶ್ವರ ಸ್ವಾಮಿ ದೇವಸ್ಥಾನ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರವು ಒಂದು ತಾಲೂಕು ಕೇಂದ್ರ ಸ್ಥಾನವು ಹೌದು. ಹಿರಿಯೂರಿನ ಒಂದು ಹೆಗ್ಗಳಿಕೆ ಎಂದರೆ ಕರ್ನಾಟಕದ ಅತಿ ಹಳೆಯದಾದ ಮೊದಲು ವಾಣಿವಿಲಾಸ ಜಲಾಶಯದ ಅಣೆಕಟ್ಟು ಹೊಂದಿರುವುದು ಅದನ್ನೇ ಇಂದು ಮಾರಿ ಕಣಿವೆ ಎಂದು ಜನಪ್ರಿಯವಾಗಿದೆ. ಇದಲ್ಲದೆ ಹಿರಿಯೂರು ಮತ್ತೊಂದಕ್ಕೆ ಸಾಕಷ್ಟು ಪ್ರಸಿದ್ದಿ ಪಡೆದಿದೆ ಎಂದರೆ ತೇರುಮಲ್ಲೇಶ್ವರ ಸ್ವಾಮಿ ಜಾತ್ರೆ.

- Advertisement - 

ತೇರು ಮಲ್ಲೇಶ್ವರನ ದೇವಸ್ಥಾನ 500 ವರ್ಷಗಳ ಇತಿಹಾಸ ಇರುವ ಅದ್ಭುತ ದೇವಾಲಯ. ದೇವಸ್ಥಾನದ ಗೋಡೆಗಳಿಗೆ ಸುಣ್ಣ ಬಣ್ಣಗಳನ್ನು ಹಚ್ಚಿ ಸಾಕಷ್ಟು ಸಿಂಗರಿಸಲಾಗಿದೆ. ನಿತ್ಯವೂ ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ಭಕ್ತಿ ಸಮರ್ಪಿಸುತ್ತಿದ್ದಾರೆ.

ಬಸ್ ಮಾರ್ಗ:
ಬೆಂಗಳೂರಿನಿಂದ 161 ಕಿ.ಮೀ ಹಾಗೂ ಚಿತ್ರದುರ್ಗದಿಂದ 42 ಕಿ.ಮೀ ಗಳಷ್ಟು ದೂರದಲ್ಲಿರುವ ಹಿರಿಯೂರು ಉತ್ತಮ ಸಾರಿಗೆ ಸಂಪರ್ಕ ಹೊಂದಿದ್ದು  ಬಸ್ ಗಳ ಮೂಲಕ ಸುಲಭವಾಗಿ ತಲುಪಬಹುದಾಗಿದೆ. ಬೆಂಗಳೂರಿನಿಂದ ಬೆಳಗಾವಿ ಹುಬ್ಬಳ್ಳಿ ಧಾರವಾಡ ಕಡೆ ತೆರಳುವ ಬಸ್ಸುಗಳು ಹಿರಿಯೂರು ಮುಖಾಂತರವೆ ಸಾಗುತ್ತವೆ.

ಗೋಪುರದ ವಿಶೇಷ:
ತೇರು ಮಲ್ಲೇಶ್ವರ ದೇವಾಲಯದ ರಾಜ ಗೋಪುರವ 45 ಅಡಿಗಳಷ್ಟು ಎತ್ತರವಿದ್ದು ದೀಪವನ್ನು ಒಳಗೊಂಡಿದೆ. ವರ್ಷಕ್ಕೊಂದು ಬಾರಿ ಅಂದರೆ ತೇರು ಮಲ್ಲೇಶ್ವರನ ಜಾತ್ರೆಯ ಸಂದರ್ಭದಲ್ಲಿ ಗೋಪುರದಲ್ಲಿ ದೀಪ ಬೆಳಗಿಸಲಾಗುತ್ತದೆ. ಕಣ್ಣುಂಬಿಕೊಳ್ಳಲು ಇದೊಂದು ಸುಂದರ ದೃಶ್ಯವೆಂದರೂ ತಪ್ಪಾಗಲಾರದು.

ತೇರು ಮಲ್ಲೇಶ್ವರ ದೇವಾಲಯದ ಹಿನ್ನೆಲೆ:
ಪರಮ ಶಿವ ಭಕ್ತೆ ಬೆಳವಡಿ ಮಲ್ಲಮ್ಮ ಈ
ಹಿಂದೆ ಹಿರಿಯೂರಿನಲ್ಲಿ ವಾಸಿಸುತ್ತಿದ್ದಳು. ಶಿವನ ಪರಮ ಭಕ್ತಿಯಾದ ಕಾರಣ ಅವಳು ಪ್ರತಿ ವರ್ಷವೂ ಚಾಚೂ ತಪ್ಪದೆ ಶಿವನ ಪರಮ ನಿಲಯವಾದ ವಾರಣಾಸಿ ಅಥವಾ ಕಾಶಿಗೆ ಭೇಟಿ ನೀಡಿ ಬರುತ್ತಿದ್ದಳು. ಹೀಗೆ ಕಾಲವು ಮುಂದೆ ಸಾಗುತ್ತಾ ಮಲ್ಲಮ್ಮಳಿಗೆ ವಯಸ್ಸಾಯಿತು. ವಯಸ್ಸಾದಂತೆ ದೇಹದ ಶಕ್ತಿಯು ಕುಗ್ಗಿತು. ಒಂದೊಮ್ಮೆ ಅವಳಿಗೆ ಕಾಡಿಗೆ ಹೋಗಲೂ ಸಹ ಆಗಲಿಲ್ಲ. ಇದರಿಂದ ತೀವ್ರ ದುಃಖಿತಳಾದ ಆಕೆ ಮನಸಿನಲ್ಲಿ ಶಿವನನ್ನು ಕುರಿತು ತಾನು ಭೇಟಿ ನೀಡಲಾಗದು ಕುರಿತು ಪ್ರಾರ್ಥಿಸಿದಳು.

ಇದರಿಂದ ಪ್ರಸನ್ನಗೊಂಡ ಶಿವನು ಆಕೆಯ ಕನಸಿನಲ್ಲಿ ಬಂದು, ನೀನು ಇನ್ನೆಂದೂ ಕಾತಿಗೆ ಬರುವ ಅಗತ್ಯವಿಲ್ಲ, ಬದಲಾಗಿ ಸ್ವತಃ ನಾನೇ ನೀನಿದ್ದೆಡೆ ಬಂದು ನೆಲೆಸುತ್ತೇನೆ ಎಂದು ಹೇಳುತ್ತ ಅವಳ ಮನೆಯಲ್ಲಿದ್ದ ಒಳಕಲ್ಲು ಶಿವಲಿಂಗ ರೂಪವಾಗಿದ್ದು ತೇರು ಮಲ್ಲೇಶ್ವರನ ದೇವಾಲಯವಾಗಿ ಪ್ರಸಿದ್ಧಿಗಳಿಸಿದೆ. ಅಲ್ಲದೆ ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂತಲೂ ಸಹ ಕರೆಯಲಾಗುತ್ತದೆ. ಫೆಬ್ರುವರಿ ತಿಂಗಳಿನಲ್ಲಿ ಹದಿನೈದು ದಿನಗಳ ಕಾಲ ತೇರು ಮಲ್ಲೇಶ್ವರ ಜಾತ್ರೆಯು ಅದ್ದೂರಿಯಾಗಿ ಜರುಗುತ್ತದೆ.

ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಜಾತ್ರೆಯ ವಿಶೇಷತೆ:
ದಕ್ಷಿಣ ಕಾಶಿ ಎಂದು ಪ್ರಸಿದ್ಧಿಯಾಗಿರುವ ಶ್ರೀತೇರು ಮಲ್ಲೇಶ್ವರ ಸ್ವಾಮಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ 15 ದಿನಗಳ ಕಾಲ ಜಾತ್ರೆ ಮಹೋತ್ಸವ ತುಂಬಾ ಅದ್ದೂರಿಯಾಗಿ ನಡೆಯುತ್ತದೆ.
ವಿಶೇಷ ಜಾತ್ರೆ ಮಹೋತ್ಸವ ಪೂಜಾ ಕಾರ್ಯಕ್ರಮಗಳು-
ಶ್ರೀ ತೇರುಮಲ್ಲೇಶ್ವರ ಸ್ವಾಮಿಯ ವಿವಿಧ ಕಾರ್ಯಕ್ರಮಗಳೊಂದಿಗೆ ಜಾತ್ರೆ ಮಹೋತ್ಸವ ವಿಜೃಂಭಣೆಯಿಂದ ನಡೆಯುವುದು ಹಿರಿಯೂರು ತಾಲೂಕು
, ಐಮಂಗಲ ಹೋಬಳಿ ದೇನಹಳ್ಳಿ ಮಜರೆ ಕರಿಯಣ್ಣ ಹಟ್ಟಿ ಗ್ರಾಮದ ಶ್ರೀ ವೀರಕರಿಯಣ್ಣ ದೇವರ ನೇತೃತ್ವದಲ್ಲಿ ಮೇಘರುದ್ಧ ಪೌರ್ಣಮಿ ಫೆಬ್ರವರಿ 03ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಶಿವಧನಸ್ಸಿನ ಗಂಗಾ ಸ್ನಾನದ ಉತ್ಸವ ಮಧ್ಯಾಹ್ನ 12 ಗಂಟೆಗೆ ಮೇಘ ನಕ್ಷತ್ರದಲ್ಲಿ ಶ್ರೀ ತೇರು ಮಲ್ಲೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವ ನಡೆಯಲಿದೆ.

ಮಧ್ಯಾಹ್ನ 1:30ಕ್ಕೆ ಪ್ರಸಾದ ವಿನಿಯೋಗ ಮತ್ತು ಸಂಜೆ 5 ಕ್ಕೆ ಶ್ರೀ ಚಂದ್ರಮೌಳೀಶ್ವರ ಶ್ರೀ ಉಮಾಮಹೇಶ್ವರ ರಥೋತ್ಸವ ನಡೆಯಲಿದೆ ಶ್ರೀ ಮದಕರಿ ಯುವಕ ಸಂಘದಿಂದ ಜಂಗಿ ಕುಸ್ತಿಯನ್ನು ಫೆಬ್ರುವರಿ 04ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಸಿದ್ದನಾಯಕ ವೃತದಲ್ಲಿ ಏರ್ಪಡಿಸಲಾಗಿದೆ.

ಫೆಬ್ರವರಿ 05ರಂದು ಗುರುವಾರ ರಾತ್ರಿ 8 ಗಂಟೆಗೆ ಸುಮಂಗಲಿಯರಿಂದ ಕರ್ಪೂರದ ಆರತಿ ಫೆಬ್ರವರಿ 06 ರಂದು ಶುಕ್ರವಾರ ಶ್ರೀ ಚಿಟುಗ ಮಲ್ಲೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಭಿಷೇಕ ಹಾಗೂ ಉಯ್ಯಾಲೋತ್ಸವ ವಸಂತೋತ್ಸವ ಓಕಳಿ ನಡೆಯಲಿದೆ.

ಫೆ. 07ರಂದು ಶನಿವಾರ ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಮಹೋತ್ಸವಕ್ಕೆ ತೆರೆ ಎಳೆಯಲಾಗುತ್ತವೆ. ಶ್ರೀ ತೇರು ಮಲ್ಲೇಶ್ವರ ಸ್ವಾಮಿ ಜಾತ್ರೆ ಮಹೋತ್ಸವಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ತನು ಮನ ಧನ ಧ್ಯಾನ ರೂಪದಲ್ಲಿ ಸಹಕರಿಸಿ ಸಾರ್ವಜನಿಕರು ಭಕ್ತಾದಿಗಳು ಶಾಂತಿ ರೀತಿಯಿಂದ ದೇವರ ಆಶೀರ್ವಾದ ಪಡೆಯಬಹುದು.

 

Share This Article
error: Content is protected !!
";