ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ದಿಂಡಾವರ ಚಂದ್ರಗಿರಿಯವರು ಗಾಯಿತ್ರಿ ಜಲಾಶಯದ 16 ಕೆರೆ ಹಾಗೂ ಐಮಂಗಲ ಹೋಬಳಿಯ 06 ಕೆರೆಗಳಿಗೆ ವಿ.ವಿ. ಸಾಗರ ಜಲಾಶಯದಿಂದ ನೀರು ತುಂಬಿಸುವ ವಿಷಯವಾಗಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಕಳೆದ 253 ದಿನಗಳಿಂದ ವಿವಿಧ ರೀತಿಯ ಹೋರಾಟ ಮಾಡಿದರೂ ಕೂಡ ಸೊಪ್ಪು ಹಾಕದ ಸರ್ಕಾರದ ವಿರುದ್ಧ ಕೊನೆಯ ಅಸ್ತ್ರವಾಗಿ ಉಳಿದ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರಿಂದ ಕಲುವಳ್ಳಿ ಭಾಗಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅವರ ಜೊತೆಗೆ ಮೂರು ದಿನಗಳ ಉಪವಾಸ ನಿರತರಾಗಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕಿನ ಹಾಲಿ ಶಾಸಕರುಗಳು ಆದಂತಹ ಡಿ.ಸುಧಾಕರ್ ರವರು ಉಪವಾಸ ನಿರತರ ಸ್ಥಳಕ್ಕೆ ಆಗಮಿಸಿ ಬೇಡಿಕೆ ಪೂರೈಸಲು ಒಪ್ಪಿಕೊಂಡ ಮೇಲೆ ಶಾಸಕರ ಕೈಯಿಂದ ಪಾನೀಯ ಸೇವಿಸಿ ಸತ್ಯಾಗ್ರಹ ವಾಪಾಸ್ ತೆಗೆದುಕೊಂಡಿರುತ್ತಾರೆ.
ಇವರ ಜೊತೆಗೆ ಸತ್ಯಾಗ್ರಹದಲ್ಲಿ ಭಾಗವಹಿಸಿ ಈ ಭಾಗದ ಜನರ ದಶಕಗಳ ಕನಸು ನನಸು ಮಾಡುವ ಸಲುವಾಗಿ ಉಪವಾಸ ಮಾಡಿದ ಎಲ್ಲಾ ರೈತ ಸಂಘದ ನಾಯಕರುಗಳಿಗೆ ಭಾರತೀಯ ಕಿಸಾನ್ ಸಂಘದ ಪರವಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾತ್ರಿಕೇನಹಳ್ಳಿ ಧನ್ಯವಾದಗಳನ್ನು ಅರ್ಪಿಸಿದರು.