ಆ.27ಕ್ಕೆ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ, ಸೆ.13 ಶೋಭಾಯಾತ್ರೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೋಟೆ ನಗರಿಯ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆ ಆಗಸ್ಟ್ 27 ರಂದು ನಡೆಯಲಿದ್ದು ಹಿಂದೂ ಮಹಾಗಣಪತಿ ಮಹತ್ವದ ಶೋಭಾಯಾತ್ರೆ ಸೆ.13ರ ಶನಿವಾರ ಅದ್ಧೂರಿಯಾಗಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತೀಯ ಪ್ರಮುಖ್ ಶರಣ್ ಪಂಪವೇರ್ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಪ್ರತಿಬಿಂಬವಾಗಿ ಹಾಗೂ ದೇಶದ ಏಕತೆಗಾಗಿ ೧೯೮೪ ಬಾಲಗಂಗಾಧರ್ ತಿಲಕ್ ಪ್ರಾರಂಭಿಸಿದ ಗಣೇಶೋತ್ಸವ ದೇಶದೆಲ್ಲೆಡೆ ಬಹಳ ವಿಜೃಂಭಣೆಯಿಂದ ನಡೆಯುತ್ತಿದೆ. ಅದರಲ್ಲೂ ಕೋಟೆ ನಾಡಿನ ಶೋಭಾಯಾತ್ರೆ ದೇಶ-ವಿದೇಶಕ್ಕೆ ಹೆಸರುವಾಸಿ ಎಂದು ತಿಳಿಸಿದರು.

- Advertisement - 

ಕೋಟೆನಾಡಿನಲ್ಲಿ ಸಾರ್ವಜನಿಕ ಗಣೇಶೋತ್ಸವ ೨೦೦೭ ರಲ್ಲಿ ಪ್ರಾರಂಭಗೊಂಡು ೧೭ ವರ್ಷಗಳಿಂದ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿದ್ದು, ದೇಶಾದ್ಯಂತ ಹೆಸರು‌ ಗಳಿಸಿದೆ. ದೇಶ ವಿದೇಶಗಳಿಂದ ಭಕ್ತರು ಭಾಗವಹಿಸುತ್ತಾರೆ. ಇದು ಜಿಲ್ಲೆಗೆ ಹೆಮ್ಮೆಯ ಸಂಗತಿ. ಅಲ್ಲದೆ ಸಂಘಟನೆಗೂ ಬಲ ತಂದುಕೊಟ್ಟಂತಹ ಕಾರ್ಯಕ್ರಮ ಇದು. ಎಲ್ಲೇ ಬೈಟಕ್ ನಡೆದರೂ ಚಿತ್ರದುರ್ಗದ ಕಾರ್ಯಕ್ರಮ ಉದಾಹರಣೆ ಆಗಿರುತ್ತದೆ ಎಂದು ಶರಣ್ ಪಂಪವೇರ್ ತಿಳಿಸಿದರು. ಆಗಸ್ಟ್ 27 ರಂದು ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದ ನಂತರ 18 ದಿನಗಳ ಕಾಲ ಪ್ರತಿದಿನ ವಿಶೇಷ ಕಾರ್ಯಕ್ರಮ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.

ಚಿತ್ರದುರ್ಗದ ಹಿಂದೂ ಮಹಾ ಗಣಪತಿಯ ಪ್ರಸಕ್ತ ಸಾಲಿನ ಅಧ್ಯಕ್ಷರಾಗಿ ಉದ್ಯಮಿ ಶರಣ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದ್ದು ಎಲ್ಲ ಕಾರ್ಯಕ್ರಮಗಳು ಇವರ ಅಧ್ಯಕ್ಷತೆಯಲ್ಲಿ ನಡೆಯಲಿವೆ ಎಂದು ಶರಣ್ ಪಂಪವೇರ್ ತಿಳಿಸಿದರು.
ಇಲ್ಲಿ ನಡೆಯಲಿರುವ ಎಲ್ಲ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಿಶ್ವಹಿಂದೂ ಪರಷತ್ ಹಾಗೂ ಬಜರಂಗದಳ ನಿರ್ವಹಿಸಲಿದೆ ಎಂದು ಅವರು ಮಾಹಿತಿ ನೀಡಿದರು.

- Advertisement - 

ದೇಣಿಗೆ ಸಂಗ್ರಹಿಸಿ ಖರ್ಚು ವೆಚ್ಚಗಳನ್ನು ಸಾರ್ವಜನಿಕರಿಗೆ ನೀಡುತ್ತಿಲ್ಲ, ಇದರಲ್ಲಿ ಸಾಕಷ್ಟು ಆರೋಪಗಳು ಕೇಳಿಬರುತ್ತಿವೆ ಎಂದು ಪತ್ರಕರ್ತರು ಗಮನ ಸೆಳೆದಾಗ ಹೌದು ನೀವು ಹೇಳುತ್ತಿರುವುದು ನಿಜ, ಈ ಕುರಿತು ಕೊನೆಯ ಸಭೆಯಲ್ಲಿ ಲೆಕ್ಕ ಪತ್ರ ಮಂಡಿಸಲಾಗಿದೆ. ಆದರೆ ಬಂದಿರುವ ಆರೋಪಗಳು ಸುಳ್ಳು, ಯಾವುದೇ ಆರ್ಥಿಕ ಅವ್ಯವಹಾರ ನಡೆದಿಲ್ಲ ಎಂದು ಶರಣ್ ಪಂಪವೇರ್ ತಿಳಿಸಿದರು.

ಸಾರ್ವಜನಿಕವಾಗಿ ಲೆಕ್ಕ ಪತ್ರ ಮಂಡಿಸಿ ಲೆಕ್ಕ ತಿಳಿಸುವ ಪದ್ಧತಿ‌ ವಿಶ್ವಹಿಂದೂ ಪರಿಷತ್ ನಲ್ಲಿ ಇಲ್ಲ. ಪ್ರಶ್ನೆ ಮಾಡಿದರೆ ವೈಕ್ತಿಕವಾಗಿ ಲೆಕ್ಕಪತ್ರ ನಿಡಲಾಗುವುದು. ಕೆಲವೊಂದು ಭಿನ್ನಾಭಿಪ್ರಾಯ ಇದೆ ಆ ಉದ್ದೇಶದಿಂದ ಸಭೆ ಮಾಡಲಾಗಿದೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಎಂದೂ ವ್ಯಕ್ತಿ ಆಧಾರಿತ ಸಂಘಟನೆಯಾಗಿ ಕೆಲಸ ಮಾಡಿಲ್ಲ, ಮುಂದೆ ಮಾಡುವುದು ಇಲ್ಲ. ಎಲ್ಲಾ ವರ್ಗದವರನ್ನೂ ಸೇರಿಸಿಕೊಂಡು ಕಾರ್ಯಕ್ರಮ ಮಾಡಲಿದ್ದೇವೆ ಎಂದು ತಿಳಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಚಂದ್ರಶೇಖರಪ್ಪ, ಪರಿಷತ್ ಪ್ರಮುಖ್ ಡಾ.ಮಂಜುನಾಥ್, ಕೇಶವ್ ಸುದ್ದಿಗೋಷ್ಠಿಯಲ್ಲಿದ್ದರು.

 

 

Share This Article
error: Content is protected !!
";