ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿಯ 46 ನೇ ಸ್ಥಾಪನಾ ದಿನದ ಅಂಗವಾಗಿ ಇಂದು ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಪಕ್ಷದ ಧ್ವಜಾರೋಹಣ ನೆರವೇರಿಸಿ, ಪ್ರದರ್ಶಿನಿಯನ್ನು ವೀಕ್ಷಿಸಿದರು.
“ತ್ಯಾಗ-ಬಲಿದಾನ ನಮ್ಮ ಪಕ್ಷದ ಹೆಗ್ಗಳಿಕೆಯ ಸಂಕೇತ” ಪಕ್ಷದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಆಯೋಜಿಸಿದ್ದ ‘ಬಿಜೆಪಿ ಸಂಸ್ಥಾಪನಾ ದಿನ‘ದಲ್ಲಿ ಭಾಗವಹಿಸಿ ಪಕ್ಷದ ಧ್ವಜಾರೋಹಣ ನೆರವೇರಿಸಲಾಯಿತು. ಸಹಸ್ರಾರು ತ್ಯಾಗ ಬಲಿದಾನಗಳ ಪ್ರತೀಕವಾಗಿ ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ. ಧೀನ ದಲಿತರ ಧ್ವನಿಯಾಗಿ, ದೇಶದ ಏಕತೆಗಾಗಿ ಹೋರಾಡುತ್ತಾ, ಪಕ್ಷ ಕಟ್ಟಿದ ಹಿರಿಯ ನೇತಾರರನ್ನು ಸ್ಮರಿಸಲಾಯಿತು ಎಂದು ಬಿ.ವೈ ವಿಜಯೇಂದ್ರ ತಿಳಿಸಿದರು.
ಸ್ವಂತ ಶಿಸ್ತು, ಬದ್ಧತೆ, ಸಮರ್ಪಣೆಯನ್ನು ಪ್ರತಿ ಕಾರ್ಯಕರ್ತರಲ್ಲಿ ತುಂಬಲು ಸಂಘದ ಹಿರಿಯರು ಬೆನ್ನ ಹಿಂದೆ ನಿಂತು ವಹಿಸಿದ ಪಾತ್ರ ನಾವೆಂದೂ ಮರೆಯುವಂತಿಲ್ಲ. ಸಂಘ ಸಂಸ್ಕಾರದ ಕಾರ್ಯಕರ್ತರಲ್ಲಿ ಭಾರತವನ್ನು ವಿಶ್ವಮಟ್ಟದಲ್ಲಿ ನಂ. 1 ಸ್ಥಾನಕ್ಕೆ ತರುವ ಸದೃಢ ಸಂಕಲ್ಪ ಇದ್ದರೆ, ಅದನ್ನು ಈಡೇರಿಸುವ ಗುರಿಯತ್ತ ಪ್ರಧಾನಿ ನರೇಂದ್ರ ಮೋದಿಯವರು ದಾಪುಗಾಲನ್ನಿಡುತ್ತಿದ್ದಾರೆ ಎಂದು ಅವರು ತಿಳಿಸಿದರು.
ನಮ್ಮ ಸಂಘಟನೆಯ ಶಕ್ತಿಯನ್ನು ಕುಗ್ಗಿಸಲು ದುಷ್ಟ ಕಾಂಗ್ರೆಸ್ ಸರ್ಕಾರ ನಮ್ಮ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಿಗೆ ಬೆದರಿಸುತ್ತಿದೆ. ಈ ಸಂಸ್ಥಾಪನೆಯ ದಿನ ನಾವೆಲ್ಲರೂ ಸಂಕಲ್ಪ ತೊಡೋಣ, ಕಾಂಗ್ರೆಸ್ ಸರ್ಕಾರದ ಯಾವುದೇ ಬೆದರಿಕೆಗಳನ್ನು ಹಿಮ್ಮೆಟ್ಟಿಸಲು ನಾವು ಶಕ್ತರಿದ್ದೇವೆ. ಪ್ರತಿಯೊಬ್ಬ ಕಾರ್ಯಕರ್ತನೊಂದಿಗೆ ಬಿಜೆಪಿ ಕರ್ನಾಟಕ ನೈತಿಕವಾಗಿ ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆಗೆ ನಿಲ್ಲಲಿದೆ.
ಈ ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತ ತೊಲಗಿಸುವವರೆಗೂ ನಾವು ವಿರಮಿಸುವ ಪ್ರಶ್ನೆಯೇ ಇಲ್ಲ, ಆ ಮೂಲಕ ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನೆಯ ಉದ್ದೇಶವನ್ನು ನಾವು ಸಾರ್ಥಕಗೊಳಿಸಲು ಶ್ರಮಿಸೋಣ ಎಂದು ವಿಜಯೇಂದ್ರ ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್‌ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಸಂಸದ ಪಿ.ಸಿ.ಮೋಹನ್, ಕಾರ್ಯಕ್ರಮದ ಸಂಚಾಲಕರು ಹಾಗೂ ಪರಿಷತ್ ಸದಸ್ಯರಾದ ಭಾರತಿ ಶೆಟ್ಟಿ, ಶಾಸಕರು, ಪರಿಷತ್‌ಸದಸ್ಯರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.