ನೆಚ್ಚಿನ ನಾಯಕನಿಗೆ ಹಾರ ತೂರಾಯಿ ಹಾಕಲು ಗದ್ದಲ ಮಾಡಿದ ಕಾರ್ಯಕರ್ತರು

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜನರೊಂದಿಗೆ ಜನತಾದಳ ಅಭಿಯಾನ ಮತ್ತು ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೂ ಮುನ್ನ ಹರಿಯಬ್ಬೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಜೆಡಿಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರು ಪೂಜೆ ಸಲ್ಲಿಸಿದ ನಂತರ ಅಲ್ಲಿಂದ ತೆರದ ವಾಹನದಲ್ಲಿ ಸುಮಾರು ಒಂದೂವರೆ ಕಿಲೋ ಮೀಟರ್ ದೂರದ ಸಮಾರಂಭದ ಸ್ಥಳಕ್ಕೆ ಅದ್ದೂರಿ ಮೆರವಣಿಗೆಯೊಂದಿಗೆ ಕರೆ ತರಲಾಯಿತು.

ತೆರೆದ ವಾಹನದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ, ಎಂ.ರವೀಂದ್ರ, ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ, ಯಶೋಧರ ಅವರು ಜೊತೆಗಿದ್ದರು.

- Advertisement - 

ನಿಖಿಲ್ ಕುಮಾರಸ್ವಾಮಿಯವರು ತೆರೆದ ವಾಹನದಲ್ಲಿ ಮುಖ್ಯರಸ್ತೆ ಮೂಲಕ ಸಾಗಿದ ಮೆರವಣಿಗೆ ಸಂದರ್ಭದಲ್ಲಿ ರಸ್ತೆ ಬದಿಯ ಎರಡು ಕಡೆಗಳಲ್ಲಿ ಸಾರ್ವಜನಿಕರು ನಿಂತು ಸ್ವಾಗತ ಕೋರುತ್ತಿದ್ದರು. ಅಷ್ಟೇ ಅಲ್ಲ ಮಹಿಳೆಯರು, ಯುವತಿಯರು, ಯುವಕರು ತಮ್ಮ ಮೊಬೈಲ್ ಗಳಲ್ಲಿ ಮೆರವಣಿಗೆ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಿಲೋ ಮೀಟರ್ ದೂರ ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಸಾಗುತ್ತಿದ್ದರು. ಹಲವು ಸ್ತಬ್ಧ ಚಿತ್ರಗಳು ನೋಡುಗರ ಗಮನ ಸೆಳೆಯುತ್ತಿದ್ದವು, ಬ್ಯಾಂಡ್ ಸೆಟ್ ಗಳ ಸದ್ದು ಜೋರಾಗಿತ್ತು.

- Advertisement - 

ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕುಂಭ ಮೇಳ ಹೊತ್ತು ಮುಂದೆ ಸಾಗುತ್ತಿದ್ದರು. ರಸ್ತೆ ಬದಿಯಲ್ಲಿ ನಿಂತು ಕೈ ಬೀಸುತ್ತಿದ್ದ ಮಹಿಳೆಯರು, ಹಿರಿ ಕಿರಿಯ ನಾಯಕರಿಗೆ ನಮಸ್ಕರಿಸುತ್ತಾ ನಿಖಿಲ್ ಮುಂದೆ ಸಾಗುತ್ತಿದ್ದರು.

ದಾರಿಯುದ್ದಕ್ಕೂ ಸ್ವಾಗತ ಕೋರಿದ ಜನರು-
ಹಿರಿಯೂರಿನಿಂದ ರಸ್ತೆ ಮೂಲಕ ಆಗಮಿಸಿದ ನಿಖಿಲ್ ಕುಮಾರಸ್ವಾಮಿ ಅವರಿಗೆ ರಸ್ತೆ ಉದ್ದಕ್ಕೂ ಹಲವು ಗ್ರಾಮಗಳ ಜನರು ಅದ್ಧೂರಿ ಸ್ವಾಗತ ಕೋರಿದರು. ಬ್ಯಾಡರಹಳ್ಳಿ, ಈಶ್ವರಗೆರೆ, ದೇವರಕೊಟ್ಟ, ಚಿಲ್ಲಹಳ್ಳಿ ಮೊಸಂಬಿ, ವಿವಿಧ ಬಗೆಯ ಬೃಹತ್ ಗಾತ್ರದ ಹೂವಿನ ಹಾರಗಳನ್ನು ಕ್ರೈನ್ ಮೂಲಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಅರ್ಪಿಸಿದರು.

ಗೊಂದಲ-
ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ದೊಡ್ಡ ದೊಡ್ಡ ಹೂವಿನ ಹಾರಗಳನ್ನು ಅರ್ಪಿಸಲು ತಾ ಮುಂದು, ನಾ ಮುಂದೆ ಹೋಗಿ ಅರ್ಪಿಸಬೇಕು ಎನ್ನುವ ಕಾತುರದಲ್ಲಿದ್ದ ಕಾರ್ಯಕರ್ತರು, ಅಭಿಮಾನಿಗಳಿಗೆ ಅವಕಾಶ ನೀಡಲಿಲ್ಲ. ನೆಚ್ಚಿನ ನಾಯಕ ನಿಖಿಲ್ ಕುಮಾರಸ್ವಾಮಿಗೆ ಹೂವಿನ ಹಾರ ಹಾಕಲು ಅವಕಾಶ ಮಾಡಿಕೊಡದಿದ್ದಾಗ ಹುಮ್ಮಸ್ಸು, ಉತ್ಸಾಹದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಗದ್ದಲ ಎಬ್ಬಿಸಿ ಹಾರ ಹಾಕಲು ಅವಕಾಶ ಕೊಡಬೇಕೆಂದು ಕೂಗಾಡುತ್ತಿದ್ದರು.

ಈ ಸಂದರ್ಭದಲ್ಲಿ ಮೈ ಹಿಡಿದ ನಿಖಿಲ್ ಕಾರ್ಯಕ್ರಮ ನಂತರ ನಿಮ್ಮಲ್ಲ ಹಾರ ಪಡೆಯುವುದರ ಜೊತೆಯಲ್ಲಿ ನಿಮ್ಮ ಜೊತೆ ಮಾತನಾಡಿದ ನಂತರವೇ ಹೊರಡುವುದಾಗಿ ತಿಳಿಸಿದರೂ ಕಾರ್ಯಕರ್ತರ ಗದ್ದಲ ಸುಮ್ಮನಾಗಲಿಲ್ಲ.

ಆಗ ಅನಿವಾರ್ಯವಾಗಿ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಅಭಿಮಾನಿಗಳು, ಕಾರ್ಯಕರ್ತರಿಗೆ ಹೂವಿನ ಹಾರ ಹಾಕಲು ಅವಕಾಶ ಮಾಡಿಕೊಟ್ಟ ನಂತರ ಗದ್ದಲ ತಣ್ಣಗಾಯಿತು.

 

Share This Article
error: Content is protected !!
";