ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
2025-26 ನೇ ಆರ್ಥಿಕ ಸಾಲಿನಲ್ಲಿ 6 ತಿಂಗಳು ಕಳೆದು ಹೋದರೂ ಶೇ.30% ಮಾತ್ರ ಅನುದಾನ ಬಳಕೆಯಾಗಿದ್ದು, ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಹೇಗೆ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ತಬ್ಧವಾಗಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಅದರಲ್ಲೂ RSS ಜಪ, ವಿವಾದಾತ್ಮಕ ಹೇಳಿಕೆಗಳಲ್ಲೇ ಕಾಲಹರಣ ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಇಲಾಖೆಗಳ ಪ್ರದರ್ಶನ ಅತ್ಯಂತ ಕಳಪೆಯಾಗಿದ್ದು, ಆರ್ ಡಿಪಿಆರ್ ಇಲಾಖೆಯಲ್ಲಿ ಕೇವಲ ಶೇ.11.02% ಐಟಿ-ಬಿಟಿ ಇಲಾಖೆಯಲ್ಲಿ ಕೇವಲ ಶೇ.10.86% ಅನುದಾನ ಬಳಕೆಯಾಗಿರುವುದು ಅವರ ಇತ್ತೀಚಿನ “ರೋಷವೇಶ”ಕ್ಕೆ ಕಾರಣ ಏನು, ಆದರೆ ಹಿಂದಿರುವ ದುರುದ್ದೇಶ ಎನ್ನುವುದನ್ನ ಎತ್ತಿ ತೋರಿಸುತ್ತದೆ ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ತಮ್ಮ ಉತ್ತರಾಧಿಕಾರಿ ಯಾರು? ಅಹಿಂದ ಚಳವಳಿ ಮುನ್ನಡೆಸುವವರು ಯಾರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಮುನ್ನ, ಬಜೆಟ್ ನಲ್ಲಿ ಘೋಷಣೆಯಾದ ಅನುದಾನವನ್ನ ಬಿಡುಗಡೆ ಮಾಡುವುದು ಯಾವಾಗ? ಅದನ್ನ ಜನಕಲ್ಯಾಣಕ್ಕೆ, ಅಭಿವೃದ್ಧಿಗೆ ಖರ್ಚು ಮಾಡುವುದು ಯಾವಾಗ? ಎನ್ನುವ ಪ್ರಶ್ನೆಗಳನ್ನ ತಮಗೆ ತಾವೇ ಕೇಳಿಕೊಳ್ಳಿ ಸ್ವಾಮಿ.
ನಿಮ್ಮಂತಹ ಅಸಮರ್ಥ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗಿರುವುದೇ ಕನ್ನಡ ನಾಡಿನ ದೊಡ್ಡ ದುರಂತ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ತಮಗೆ ಇರುವ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ಅಶೋಕ್ ತಾಕೀತು ಮಾಡಿದ್ದಾರೆ.

