ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡುತ್ತಿರುವ ರಾಜ್ಯದ ಜನವಿರೋಧಿ ಕರ್ನಾಟಕ ಕಾಂಗ್ರೆಸ್ ಸರ್ಕಾರದ ನಡೆ ಗಮನಿಸಿದರೆ ಬಡವರ ಹೊಟ್ಟೆಯ ಮೇಲೆ ‘ಬರೆ’ ಎಳೆಯುತ್ತಿರುವುದು ಸುಸ್ಪಷ್ಟವಾಗುತ್ತಿದೆ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ಮಾನದಂಡಗಳ ನೆಪವೊಡ್ಡಿ ನಾಡಿನ 11 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡಿ ಅನ್ನಭಾಗ್ಯ ಯೋಜನೆಯ ಜತೆಗೆ ಗೃಹಲಕ್ಷ್ಮಿ ಹಣಕ್ಕೂ ಕತ್ತರಿ ಪ್ರಯೋಗಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಹೊರಟಿದೆ ಎಂದು ಅವರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಾಲು ಸಾಲು ಆಮಿಷಗಳನ್ನೊಡ್ಡಿ ಮತ ಪಡೆದು ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆಯುವ ಮುನ್ನವೇ ‘ಉಂಡೂ ಹೋದ ಕೊಂಡೂ ಹೋದ‘ ಎಂಬ ಗಾದೆ ಮಾತನ್ನು ನೆನಪಿಸುವಂತೆ ಲಕ್ಷಾಂತರ ಬಡ ಕುಟುಂಬಗಳನ್ನು ಸಂಕಷ್ಟದ ಸ್ಥಿತಿಗೆ ತಳ್ಳುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕಡು ಬಡವರ ಶಾಪ ತಟ್ಟದೇ ಇರಲಾರದು ಎಂದು ವಿಜಯೇಂದ್ರ ಎಚ್ಚರಿಸಿದ್ದಾರೆ.

