ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಘೋಷಿಸಿದ್ದ ಜನವಿರೋಧಿ ಮಹಾಘಟ್ ಬಂಧನ್ ಪಕ್ಷಗಳನ್ನು ಮತದಾರರು ತಿರಸ್ಕರಿಸಿ ನಾವು ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಪರವಾಗಿದ್ದೇವೆಂದು, ಬಿಹಾರ ಜನತೆ ಎನ್ ಡಿಎಗೆ ಮತ್ತೊಮ್ಮೆ ಆಡಳಿತ ನೀಡಿದ್ದಾರೆಂದು ಹಿರಿಯ ಜೆಡಿಎಸ್ ಮುಖಂಡ ಎಂ ರವೀಂದ್ರಪ್ಪ ಹೇಳಿದರು.
ಪತ್ರಿಕಾ ಪ್ರಕಟಣೆ ಮೂಲಕ ಬಿಹಾರ ಚುನಾವಣೆ ಫಲಿತಾಂಶ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಆಡಳಿತ ವೈಖರಿ ಮೆಚ್ಚಿ ಐತಿಹಾಸಿಕ ಗೆಲುವು ನೀಡುವ ಮೂಲಕ ದೇಶದ ಸಮರ್ಥ ನಾಯಕ ಮೋದಿಯೆಂದು ಬಿಹಾರ ಜನತೆ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳಿಲ್ಲ. ಬೆಳಗಾವಿಯಲ್ಲಿ ಹೋರಾಟ ಮಾಡಿ ಕಬ್ಬು ಬೆಳೆಗಾರರು ಕಬ್ಬಿಗೆ ಬೆಂಬಲ ಬೆಲೆ ಪಡೆದುಕೊಂಡರು.
ಈರುಳ್ಳಿ ಹಾಗೂ ಮೆಕ್ಕೆಜೋಳ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈರುಳ್ಳಿ ಬೆಳೆದರೂ ಹಾಕಿರುವ ಬಂಡವಾಳ ಕೂಡ ಬರುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಸಮಸ್ಯೆಯನ್ನು ಬಗೆಹರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ರವೀಂದ್ರಪ್ಪ ಕಿಡಿಕಾರಿದರು.
ಕರ್ನಾಟಕ ರಾಜ್ಯದಲ್ಲಿ 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಹಾರ ಫಲಿತಾಂಶದಂತೆ ರಾಜ್ಯದಲ್ಲೂ ಎನ್ ಡಿಎ ಜಯಭೇರಿ ಬಾರಿಸಲಿದೆ. ಹೈಕಮಾಂಡ್ ತಿರ್ಮಾನದಂತೆ ಮುಂಬರುವ ಸ್ಥಳೀಯ ಪಟ್ಟಣ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆ, ಜಿಪಂ ಮತ್ತು ತಾಪಂ ಚುನಾವಣೆಗಳಲ್ಲಿ ಸಮರ್ಥವಾಗಿ ಎದುರಿಸಿ, ಎನ್ ಡಿಎ ಪಕ್ಷಗಳು ಅಧಿಕಾರಕ್ಕೆ ಬರಲು ಹೋರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸಿಂಗಲ್ ಸಂಖ್ಯೆಗೆ ಇಳಿಯುವ ಮೂಲಕ ಹೀನಾಯವಾಗಿ ಸೋತು ಮುಖಭಂಗ ಅನುಭವಿಸುವಂತೆ ಮಾಡಿರುವ ಬಿಹಾರ ಮತದಾರರು ಸರಿಯಾಗಿ ಮುಟ್ಟಿ ನೋಡಿಕೊಳ್ಳುವಂತೆ ಬುದ್ಧಿ ಕಲಿಸಿದ್ದಾರೆ. ಕಾಂಗ್ರೆಸ್ ಧೋರಣೆಯನ್ನು ಜನರು ವಿರೋಧಿಸಿದ್ದು, ದೇಶದಲ್ಲಿ ಎನ್ ಡಿಎ ಅಭಿವೃದ್ಧಿಯ ಅಲೆ ಮುಂದುವರಿದಿದೆ ಎಂದು ಜೆಡಿಎಸ್ ಮುಖಂಡ ಎಂ.ರವೀಂದ್ರಪ್ಪ ವಿಶ್ವಾಸವ್ಯಕ್ತಪಡಿಸಿದರು.

