ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡುತ್ತಿದ್ದ ಆರೋಪದ ಮೇಲೆ ನಗರದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನೌಕರನನ್ನು ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ನಗರದ ಮತ್ತಿಕೆರೆ ನಿವಾಸಿ, ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಆರೋಪಿ ಬಿಇಎಲ್ ನೌಕರ ದೀಪರಾಜ್ ಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ರಹಸ್ಯವಾಗಿ ತಾನು ಕೆಲಸ ಮಾಡುತ್ತಿದ್ದ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡುತ್ತಿದ್ದ ಆರೋಪದ ಮೇರೆಗೆ ಕಾರ್ಯಾಚರಣೆ ನಡೆಸಿದ ಸೇನಾ ಗುಪ್ತಚರ ಹಾಗೂ ಕೇಂದ್ರ ಗುಪ್ತಚರ ಸಂಸ್ಥೆಗಳು ದೀಪರಾಜ್ನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿರುವುದಾಗಿ ಮೂಲಗಳು ತಿಳಿಸಿವೆ.
ಇಂಟರ್ನೆಟ್ ಕರೆಗಳ ಮೂಲಕ ಪಾಕ್ ಏಜೆಂಟ್ಗಳೊಂದಿಗೆ ದೀಪರಾಜ್ ಸಂಪರ್ಕದಲ್ಲಿದ್ದು, ಟೆಲಿಗ್ರಾಂ ಆ್ಯಪ್ ಹಾಗೂ ಇ – ಮೇಲ್ ಮೂಲಕ ಮಾಹಿತಿ ನೀಡಿರುವುದು ಗೊತ್ತಾಗಿದೆ. ಆರೋಪಿ ಬಳಿಯಿದ್ದ ಲ್ಯಾಪ್ ಟಾಪ್, ಮೊಬೈಲ್ ವಶಕ್ಕೆ ಪಡೆದು ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಕಗಳು ಮಾಹಿತಿ ನೀಡಿವೆ.