ಚಂದ್ರವಳ್ಳಿ ನ್ಯೂಸ್, ಹಾಸನ:
ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರನ್ನು ಗುರಿಯಾಗಿಸಿ ಚಿನ್ನಾಭರಣ ದೋಚುತ್ತಿದ್ದ ನಾಲ್ವರು ಕಳ್ಳಿಯರನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊರ ರಾಜ್ಯದ ಆರೋಪಿಗಳಾದ ಶಶಿಕಲಾ (35), ಮಾಧವಿ (40), ಅಕಿಲ (30) ಹಾಗೂ ವಿದ್ಯಾ (29) ಬಂಧಿತರು. ಬಂಧಿತರೆಲ್ಲರೂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಗ್ರಾಮದವಾಗಿದ್ದಾರೆ.
ಬಸ್ಗಳಲ್ಲಿ ಪ್ರಯಾಣಿಕರ ದಟ್ಟಣೆ, ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ ಹತ್ತುವಾಗ ಅವರ ಮೈಮೇಲಿನ ಮತ್ತು ವ್ಯಾನಿಟಿ ಬ್ಯಾಗ್ಗಳಲಿದ್ದ ಚಿನ್ನಾಭರಣಗಳನ್ನು ಆರೋಪಿಗಳು ಕದಿಯುತ್ತಿದ್ದರು. ಕೃತ್ಯ ಎಸಗಿದ ನಂತರ ದಾರಿ ಮಧ್ಯದಲ್ಲೇ ಬಸ್ನಿಂದ ಇಳಿದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಶಶಿಕಲಾ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನ ಹಲವು ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. ಮಾಧವಿ ಹಾಗೂ ಅಕಿಲ ಇದೀಗ ಮೊದಲ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ.
ಹೊಳೆನರಸೀಪುರ ನಗರ ಠಾಣೆ ಪೊಲೀಸರು ನಾಲ್ವರು ಮಹಿಳಾ ಆರೋಪಿಗಳನ್ನು ಬಂಧಿಸಿ ಅವರಿಂದ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ 6.38 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಮದ್ ಸುಜೇತಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.