ಚಂದ್ರವಳ್ಳಿನ್ಯೂಸ್ ಹೊಸದುರ್ಗ:
ರಾಜಕೀಯ ಬೇರೆ, ಸಾಂಸಾರಿಕ ಜೀವನವೇ ಬೇರೆ ಆದರೆ ಇಲ್ಲೊಬ್ಬ ಮಹಿಳೆ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದುಕೊಂಡು ಸಪ್ತಪದಿ ತುಳಿದು ಕೈಹಿಡಿದ ಗಂಡನನ್ನೇ ತನ್ನ ಪ್ರಿಯಕರನಿಗಾಗಿ ಕೊಲೆ ಮಾಡಿಸಿರುವುದು ಇಡೀ ತಾಲೂಕನ್ನೇ ಬೆಚ್ಚಿ ಬೀಳಿಸಿದೆ.
ಕೊಲೆಯಾದ ವ್ಯಕ್ತಿ ತಾಲೂಕಿನ ಜಾನಕಲ್ಲು ಗಾಮದ ಪ್ರಸನ್ನ(45). ಈತನ ಪತ್ನಿ ಸೇರಿ ಒಟ್ಟು ನಾಲ್ವರನ್ನು ಹೊಸದುರ್ಗ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರನ್ನು ತಾಲೂಕಿನ ಬೆಲಗೂರು ಕಬ್ಬಳ ಗ್ರಾಮದ ಕಾರು ಚಾಲಕ ಯಶವಂತ(೨೮), ಅಜ್ಜಂಪುರ ತಾಲೂಕಿನ ಗಡಿಹಳ್ಳಿ ಗ್ರಾಮದ ಕಾರು ಚಾಲಕ ಲೋಹಿತ ಜಿ.ಪಿ(೩೦), ಹೊಸದುರ್ಗ ತಾಲೂಕಿನ ಡಿ.ಮಲ್ಲಾಪುರ ಗ್ರಾಮದ ಕಾರು ಮತ್ತು ಅಟೋ ಚಾಲಕ ವೀರಭದ್ರಪ್ಪ(೨೪) ಹಾಗು ಕೊಲೆಯಾದ ಪ್ರಸನ್ನ ಅವರ ಪತ್ನಿ ಜಾನಕಲ್ಲು ಗ್ರಾಮ ಪಂಚಾಯಿತಿ ಹಾಲಿ ಸದಸ್ಯೆ ಗಾಯತ್ರಿ.ಪಿ.ಆರ್(೩೦). ಪ್ರಕರಣದ ವಿವರ:
ಕಳೆದ ಮಾರ್ಚ್ ೧೭ ರಂದು ಜಾನಕಲ್ ಗ್ರಾಮದ ಪ್ರಸನ್ನ(೪೫) ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದರು. ಮಾರ್ಚ್-೨೧ ರಂದು ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿ ಬಳಿ ಪ್ರಸನ್ನ ಅವರ ಶವ ಪತ್ತೆಯಾಗಿತ್ತು. ಕೊಲೆ ಮಾಡಿ ಅರಣ್ಯದಲ್ಲಿ ಪ್ರಸನ್ನ ಅವರ ಶವವನ್ನು ಎಸೆಯಲಾಗಿತ್ತು.
ವೃತ ವ್ಯಕ್ತಿ ಪ್ರಸನ್ನ ಅವರ ಪತ್ನಿ ಗಾಯತ್ರಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಕೊಲೆ ಮಾಡಿಸಿರುವ ಶಂಕೆ ವ್ಯಕ್ತವಾಗಿದ್ದು ಲಿಂಗದಹಳ್ಳಿ ಮತ್ತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.

ಕೊಲೆ ಪ್ರಕರಣದಲ್ಲಿ ಶಾಸಕ ಬಿ.ಜಿ.ಗೋವಿಂದಪ್ಪನವರ ಕಾರು ಚಾಲಕ ಯಶವಂತ್ ಸೇರಿದಂತೆ ಪೊಲೀಸರು ೪ ಜನ ಆರೋಪಿತರನ್ನು ವಶಕ್ಕೆ ಪಡೆದುಕೊಂಡು ಬುಧವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

