ಮೋದಿಯವರ ನಿವಾಸದ ಮೇಲೆ ಬಾಂಬ್ ದಾಳಿ ಮಾಡಬೇಕು ಎಂದಿದ್ದ ಕಿಡಿಗೇಡಿ ಬಂಧನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿವಾಸದ ಮೇಲೆ ಬಾಂಬ್ ದಾಳಿ ಮಾಡಬೇಕು ಎಂದು ಹೇಳಿದ್ದ ಕಿಡಿಗೇಡಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಬಂಧಿತ ಆರೋಪಿ ನವಾಜ್ ಎಂದು ಗುರುತಿಸಲಾಗಿದೆ. ಪ್ರಧಾನಿ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ವಿಡಿಯೋವನ್ನು ಆರೋಪಿ ತನ್ನ ಪಬ್ಲಿಕ್ ಸರ್ವೆಂಟ್ ಎಂಬ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದನು ಎನ್ನಲಾಗಿದೆ.

ಈಗಾಗಲೇ ವೈರಲ್ ಆಗಿರುವ ಈ ವಿಡಿಯೋದಲ್ಲಿ ನವಾಜ್, ಇಂದು ಭಾರತ ಮತ್ತು ಪಾಕಿಸ್ತಾನ ಯುದ್ಧದಲ್ಲಿ ತೊಡಗಿವೆ. ಹೀಗಿದ್ದರೂ, ಪ್ರಧಾನಿ ನರೇಂದ್ರ ಮೋದಿಯವರ ನಿವಾಸದ ಮೇಲೆ ಇನ್ನೂ ಏಕೆ ಬಾಂಬ್ ದಾಳಿ ಮಾಡಿಲ್ಲ? ಜನರು ಶಾಂತಿಯುತವಾಗಿ ಬದುಕುತ್ತಿದ್ದಾಗ, ಈ ಯುದ್ಧದಂತಹ ಪರಿಸ್ಥಿತಿಯನ್ನು ಪ್ರಧಾನಿ ಮೋದಿಯವರೇ ಸೃಷ್ಟಿಸಿದರು. ಮೊದಲು ಅವರ ನಿವಾಸದ ಮೇಲೆ ಬಾಂಬ್ ದಾಳಿ ಮಾಡಬೇಕು ಎಂದು ಪೋಸ್ಟ್ ಮಾಡಿದ್ದನು.

ಬಂಡೇಪಾಳ್ಯ ಪೊಲೀಸರು ಎಫ್‌ಐಆರ್ ದಾಖಲಿಸಿ ಕಾರ್ಯಾಚರಣೆ ಮಾಡಿ ಆರೋಪಿ ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.

Share This Article
error: Content is protected !!
";