ಎರಡು ದಶಕಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಗಳ ಬಂಧನ

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಎರಡು ದಶಕಗಳಿಂದ ಪರಾರಿಯಾಗಿದ್ದ ಕಳ್ಳತನದ ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಗರಾಜು (47) ಮತ್ತು ಶ್ರೀನಿವಾಸಲು (39) ಅವರು ಕಳೆದ 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಬಂಧಿತ ಆರೋಪಿಗಳಾಗಿದ್ದಾರೆ. 

  ಆರೋಪಿಗಳಿಬ್ಬರೂ 2004 ರಲ್ಲಿ ತಾಲ್ಲೂಕಿನ ಕೈಗಾರಿಕಾ ಪ್ರದೇಶವಾದ ಬಾಶೆಟ್ಟಿಹಳ್ಳಿ ಬಳಿಯ ಟ್ರಾನ್ಸ್ ಎಲೆಕ್ಟ್ರಿಕ್ ಮೋಟರ್ ಕಂಪನಿಯ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಗಳಾಗಿ ಕೆಲಸ ಮಾಡುತ್ತಿದ್ದರು. ಕಂಪನಿಗೆ ಬೀಗ ಹಾಕಿದ್ದ ಸಮಯದಲ್ಲಿ ವಾಚ್ ಮನ್ ಗಳಾಗಿದ್ದ ಇವರಿಬ್ಬರು ಕಂಪನಿಯಲ್ಲಿನ ಮೋಟರ್‌ಗಳನ್ನು ಕಳವು ಮಾಡಿ ಮಾರಾಟ ಮಾಡಿ ಸಿಕ್ಕಿ ಬಿದ್ದಿದ್ದರು. ನಾಗರಾಜು (26) ಮತ್ತು ಶ್ರೀನಿವಾಸಲು (19) ಇಬ್ಬರ ಮೇಲೆ ಮೋಟರ್ ಕಳ್ಳತನದ ಆರೋಪದ ಮೇಲೆ ಕ್ರೈಂ ನಂ 95/2004 ರಂತೆ ಪ್ರಕರಣ ದಾಖಲಾಗಿ ಮೂರು ತಿಂಗಳ ಕಾಲ ಜೈಲಿನಲ್ಲಿದ್ದ ಗೆಳೆಯರು ನಂತರ ಜಾಮೀನಿನ ಮೇಲೆ ಹೊರಗೆ ಬಂದಿದ್ದರು. 

   ಆರೋಪಿಗಳ ಪರ ವಾದ ಮಾಡಿದ್ದ ವಕೀಲ ಜಾಮೀನಿನ ಮೇಲೆ ಬಿಡುಗಡೆಯಾದ ಆರೋಪಿಗಳಿಗೆ ಸಂಪೂರ್ಣ ಮಾಹಿತಿ ನೀಡದೆ ನಿಮ್ಮ ಮೇಲಿನ ಪ್ರಕರಣ ವಜಾ ಆಗಿದೆ ಎಂದು ಹೇಳಿದ್ದರು ಹೀಗಾಗಿ ನಾವು ಈ ವಿಚಾರವನ್ನು ಮರೆತಿದ್ದೆವು ಎಂದು ಪೊಲೀಸ್ ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆ. 

   ಇಪ್ಪತ್ತು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿಗಳ ಮೇಲೆ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ನ್ಯಾಯಾಲಯ ಎಲ್‌ಆರ್‌ಪಿ (ತಲೆ ಮರೆಸಿಕೊಂಡ ಆರೋಪಿಗಳು ) ಗಳು ಎಂದು ನಿರ್ಧಾರ ಮಾಡಿತ್ತು. ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಗ್ರಾಮಾಂತರ ಠಾಣೆಯ ಇನ್ಸ್‌ಪೆಕ್ಟರ್ ಸಾಧಿಕ್ ಪಾಷ ಅವರ ನೇತೃತ್ವದಲ್ಲಿ ತನಿಖೆಗೆ ಇಳಿದ ತಂಡ ಆರೋಪಿಗಳನ್ನು ಆಂದ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

  ಆಂದ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂ, ಪುಟ್ಟಪರ್ತಿ ಎರಡು ಪೊಲೀಸ್ ಠಾಣೆಗಳಲ್ಲಿ ಹೋಂ ಗಾರ್ಡ್ ಆಗಿ ಕೆಲಸ ಮಾಡಿದ್ದ ನಾಗರಾಜು, ನಂತರ ಗಂಡ ಹೆಂಡತಿ ನಡುವೆ ಜಗಳವಾಗಿ ಕೆಲಸ ಬಿಟ್ಟು, ಧರ್ಮಾವರಂ ಜಿಲ್ಲೆ ಸಿದ್ದರಾಮಪುರಂ ಗ್ರಾಮದಲ್ಲಿ ವ್ಯವಸಾಯ ಮಾಡಿಕೊಂಡಿದ್ದ. 

  ಬಂಧನವಾಗಿ ಮೂರು ತಿಂಗಳ ನಂತರ ಜಾಮೀನಿನ ಮೇಲೆ ಹೊರಗೆ ಬಂದ ಮತ್ತೊಬ್ಬ ಆರೋಪಿ ಶ್ರೀನಿವಾಸಲು ಆಂದ್ರಪ್ರದೇಶದ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಬಿಎ ಜೊತೆಗೆ ಮಾರ್ಕೆಟಿಂಗ್ ಗ್ರಾಜ್ಯುಯೆಷನ್ ಪಡೆದು ಟಾಟಾ ಕಂಪನಿಯಲ್ಲಿ ಮಾರ್ಕೆಟಿಂಗ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. 

  ಒಮ್ಮೆ ಜೈಲಿಗೆ ಹೋಗಿ ಬಂದ ಬಳಿಕ ಬುದ್ಧಿ ಕಲಿತಿದ್ದ ಇಬ್ಬರೂ ಆರೋಪಿಗಳು ಮತ್ತೆ ಕೆಟ್ಟದಾರಿ ಹಿಡಿಯದೆ ಓದಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣ ಪಡೆದು ಜೀವನ ನಡೆಸುತ್ತಿದ್ದರು. ಆದರೆ ಮಾಡಿದ ಪಾಪ ಈಗಲೇ ಅನುಭವಿಸಬೇಕು ಎಂಬ ನಾಣ್ಣುಡಿಯಂತೆ ಮಾಡಿದ ತಪ್ಪಿಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ.

 ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷ ನೇತೃತ್ವದ ತಂಡ ಆರೋಪಿಗಳಾದ ನಾಗರಾಜು, ಶ್ರೀನಿವಾಸಲುರನ್ನ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವುದು. ಮುಖ್ಯಪೇದೆ ಗೋವಿಂದರಾಜು, ಪೇದೆ ನಾಗೇಶ್ ಇದ್ದರು.

Share This Article
error: Content is protected !!
";