ಚಂದ್ರವಳ್ಳಿ ನ್ಯೂಸ್, ನೆಲಮಂಗಲ :
ಹಳ್ಳಿಕಾರ್ ತಳಿಯ ಎರಡು ಹೋರಿಗಳ ಕತ್ತು ಕೊಯ್ದು ನಡುರಸ್ತೆಯಲ್ಲಿ ಎಸೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಾದ ಬೆಂಗಳೂರಿನ ಎಂಎಸ್ ಪಾಳ್ಯದ ನಿವಾಸಿ ಇಮ್ರಾನ್ (30), ಮಹಮ್ಮದ್ ಸಾಬ್ ಪಾಳ್ಯದ ನಿವಾಸಿ ಸಯ್ಯದ್ ನವಾಜ್ (35), ಶ್ರೀನಿಧಿ ಬಡಾವಣೆಯ ನಿವಾಸಿ ವೆಂಕಟೇಶ್ ಅಲಿಯಾಸ್ ಮಹಮ್ಮದ್ ಶುಯಾಬ್ (20) ಬಂಧಿತರು ಎನ್ನಲಾಗಿದೆ.
ಏನಿದು ಘಟನೆ: ಕಳೆದ ಆಗಸ್ಟ್10ರಂದು ನೆಲಮಂಗಲ ತಾಲೂಕಿನ ಅರಳಸಂದ್ರ ಗ್ರಾಮದ ಕುಮದ್ವತಿ ನದಿಗೆ ಅಡ್ಡವಾಗಿ ಕಟ್ಟಿರುವ ಸೇತುವೆ ಮೇಲೆ ಎರಡು ಹಳ್ಳಿಕಾರ್ ತಳಿಯ ಹಸುಗಳ ಕತ್ತು ಕೊಯ್ದು ದುಷ್ಕರ್ಮಿಗಳು ಎಸೆದಿದ್ದರು. ಕೃತ್ಯ ಎಸಗಿದ ಆರೋಪಿಗಳು ಆಗಸ್ಟ್ 10ರ ಮಧ್ಯರಾತ್ರಿ ಟೆಂಪೋ ಮೂಲಕ ಅಕ್ರಮವಾಗಿ ದನಗಳನ್ನು ಬೆಂಗಳೂರಿನಿಂದ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿದ್ದರು.
ಸಾಗಿಸುವ ವೇಳೆ ಒಂದು ಹೋರಿ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದರೆ, ಮತ್ತೊಂದು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಇವು ಮಾಂಸಕ್ಕೆ ಯೋಗ್ಯವಲ್ಲ ಎಂದು ತಿಳಿದ ಬಂಧಿತ ಆರೋಪಿಗಳು, ಅವುಗಳ ಕತ್ತು ಕೊಯ್ದು ಅಲ್ಲಿಯೇ ಎಸೆದು ಪರಾರಿಯಾಗಿದ್ದರು. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಇದನ್ನು ಸದನದಲ್ಲಿ ಖಂಡಿಸಿ ಗಮನ ಸೆಳೆದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಆರೋಪಿಗಳನ್ನು ಶೀಘ್ರ ಪತ್ತೆ ಮಾಡುವಂತೆ ನೆಲಮಂಗಲ ಗ್ರಾಮಾಂತರ ಇನ್ಸ್ಪೆಕ್ಟರ್ ನರೇಂದ್ರಬಾಬು ಅವರಿಗೆ ಸೂಚನೆ ನೀಡಿದ್ದರು. ಟೆಂಪೋ ನಂಬರ್ ಪತ್ತೆ ಮಾಡಿದ ಪೊಲೀಸರ ತಂಡ, ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

