ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾರುತಿ ಸುಜುಕಿ ನಿರ್ಮಿತ ಓಮ್ನಿ ಕಾರುಗಳನ್ನು ಕದಿಯುತ್ತಿದ್ದ ಮೂರು ಮಂದಿ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆ ಪೊಲೀಸರು ಓಮ್ನಿ ಕಾರುಗಳನ್ನು ಕದ್ದು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದ ಕಳ್ಳರನ್ನು ಬಂಧಿಸಿದ್ದಾರೆ.
ಉಮೇಶ್, ತಬ್ರೇಜ್ ಹಾಗೂ ಜಬೀರ್ ಖಾನ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳಿಂದ 12 ಲಕ್ಷ ಮೌಲ್ಯದ ಆರು ಓಮ್ನಿ ಕಾರುಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದೇ ಆರೋಪಿಗಳು ಹಿಂದೆ ಟ್ರಾಕ್ಟರ್‌ಗಳನ್ನು ಕಳ್ಳತನ ಮಾಡುತ್ತಿದ್ದು ಈ ಮೂರು ಮಂದಿ ಕಳ್ಳರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು 2020ರಲ್ಲಿ ಬಂಧಿಸಿ ಜೈಲಿಗಟ್ಟಿದ್ದರು.
ಜೈಲಿನಿಂದ ಹೊರಬಂದ ಆರೋಪಿಗಳು ಓಮ್ನಿ ಕಾರುಗಳ ಕಳ್ಳತನ ಆರಂಭಿಸಿದ್ದರು. ಬೆಂಗಳೂರಿನ ವಿವಿಧೆಡೆ ಓಮ್ನಿ ಕಾರುಗಳನ್ನು ಕದ್ದು, ಅವುಗಳನ್ನು ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು.
ವಿದ್ಯಾರಣ್ಯಪುರ ಪೊಲೀಸ್ ವ್ಯಾಪ್ತಿಯಲ್ಲಿ ಮೇ ತಿಂಗಳಿನಲ್ಲಿ ಓಮ್ನಿ ಕಾರು ಕದ್ದೊಯ್ದಿದ್ದ ಆರೋಪಿಗಳಿಗಾಗಿ ವಿಶೇಷ ತಂಡ ರಚಿಸಲಾಗಿತ್ತು. ಕಳ್ಳತನದ ಹಿಸ್ಟರಿ ಹೊಂದಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕೃತ್ಯ ಬಯಲಾಗಿದೆ ಎಂದು ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

