ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಮೈಸೂರಿನ ಉದಯಗಿರಿ ಘಟನೆ ವಿರುದ್ಧ ಬಿಜೆಪಿ ವತಿಯಿಂದ ಸೋಮವಾರ ಮೈಸೂರು ಚಲೋ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದರು.
ಜಯನಗರದಲ್ಲಿ ಪ್ರಧಾನಿ ಮೋದಿಯವರ ಮನ್ ಕಿ ಬಾತ್ ಆಲಿಸಿ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ. ಉದಯಗಿರಿ ಘಟನೆ, ಪೊಲೀಸ್ ಠಾಣೆಗೆ ಪುಡಾರಿಗಳು ನುಗ್ಗಿ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದ್ದು ಮೈಸೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ವಿಜಯೇಂದ್ರ ಹೇಳಿದರು.
ಪೊಲೀಸರು ಮತ್ತು ಪೊಲೀಸ್ ಠಾಣೆ ಮೇಲೆ ದಾಂಧಲೆ ಮಾಡಿದವರನ್ನು ರಕ್ಷಿಸುವ ಕೆಲಸ ಸರ್ಕಾರದಿಂದ ನಡೆಯುತ್ತಿದೆ. ದರೋಡೆ ಕೊಲೆ. ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿವೆ. ಬೆಂಗಳೂರು ಸುರಕ್ಷಿತವಾಗಿಲ್ಲ. ಇದೆಲ್ಲದಕ್ಕೂ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಗೃಹ ಸಚಿವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ರಾಜೀನಾಮೆ ಕೊಡಬೇಕೇ? ಅಥವಾ ಕೊಡುತ್ತೇನೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಇದು ಅವಿವೇಕತನದ ಪರಮಾವಧಿ ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದರು.
ಕಾನೂನು- ಸುವ್ಯವಸ್ಥೆ ಕಾಪಾಡಿ ಅಭಿವೃದ್ಧಿ ಮಾಡಬೇಕೆಂದು ನಿಮಗೆ ರಾಜ್ಯದ ಜನರು ಆಶೀರ್ವಾದ ಮಾಡಿದ್ದಾರೆ. ಅದನ್ನು ಮಾಡದೇ ಈ ರೀತಿ ಹೇಳಿಕೆ ನೀಡಿದರೆ ದೇಶದ್ರೋಹಿಗಳು, ಕೊಲೆಗಡುಕರಿಗೆ ಆನೆಬಲ ಬಂದಂತಾಗುತ್ತದೆ ಎಂದು ಪರಮೇಶ್ವರ್ ವಿರುದ್ಧ ವಿಜಯೇಂದ್ರ ಹರಿಹಾಯ್ದರು.
ರಾಜ್ಯದ ವಿರುದ್ಧ ಪಿತೂರಿ:
ಕರ್ನಾಟಕ ರಾಜ್ಯದ ಬಸ್ ಕಂಡಕ್ಟರ್ ಮೇಲೆ ಬೆಳಗಾವಿಯಲ್ಲಿ ಹಲ್ಲೆ ಮಾಡಿರುವುದು ಸಹಿಸಲಸಾಧ್ಯ. ಈ ನೆಲದ ನೀರು, ಅನ್ನ, ಗಾಳಿ ಸೇವಿಸಿ ಕನ್ನಡದ ವಿರುದ್ಧ ಮಾತನಾಡುವುದು, ರಾಜ್ಯದ ವಿರುದ್ಧ ಪಿತೂರಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ. ನಮ್ಮ ನೆಲದಲ್ಲಿ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ ಎಂದು ವಿಜಯೇಂದ್ರ ಗುಡುಗಿದರು.
ಅನೇಕ ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿದ್ದೇನೆ. ಇದರ ವಿರುದ್ಧ ಕನ್ನಡಿಗರು ಧ್ವನಿ ಎತ್ತಬೇಕು. ಷಡ್ಯಂತ್ರ, ಪಿತೂರಿ ಮಾಡುವವರನ್ನು ಸರ್ಕಾರ ಹತ್ತಿಕ್ಕಬೇಕಿದೆ ಎಂದು ಆಗ್ರಹಿಸಿದರು.
ಮೈಸೂರು ಚಲೋ ನಿರಾಕರಣೆ-
ಮೈಸೂರಿನ ಉದಯಗಿರಿಯ ನಡೆದ ಗಲಭೆ ಖಂಡಿಸಿ ಬಿಜೆಪಿ ಮೈಸೂರು ಚಲೋ ಬೃಹತ್ ಜನಜಾಗೃತಿ ಸಭೆಗೆ ಅನುಮತಿ ನಿರಾಕರಿಸಲಾಗಿದೆ. ಹೀಗಾಗಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ. ಇನ್ನು ಸಭೆಗೆ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿ ಮಾಡಿರುವುದನ್ನು ವಿರೋಧಿಸಿ ಬಿಜೆಪಿ ಹೈಕೋರ್ಟ್ ಮೊರೆ ಹೋಗಿದೆ. ಒಂದು ವೇಳೆ ಅನುಮತಿ ಸಿಕ್ಕರೆ ಬಿಜೆಪಿಯಿಂದ ಮತ್ತೊಮ್ಮೆ ಬೃಹತ್ ಮೈಸೂರು ಚಲೋ ನಡೆಸಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಗಲಾಟೆಗೆ ಬಿಜೆಪಿ, RSS ಕಾರಣವೆಂದು ಆರೋಪಿಸಿ ಕೆಲ ಸಂಘಟನೆಗಳಿಂದ ಜನಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪದಡಿ ಎರಡೂ ಕಾರ್ಯಕ್ರಮಗಳಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇನ್ನು ಕೇಸ್ಗೆ ಸಂಬಂಧಿಸಿದಂತೆ ಮೌಲ್ವಿ ಮುಫ್ತಿ ಮುಸ್ತಾಕ್ ಮಕ್ಬೋಲಿಯನ್ನ ಗಲಭೆ ನಡೆದ 11 ದಿನಗಳ ಬಳಿಕ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಮೈಸೂರಿನ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದನ್ನ ಸ್ಮರಿಸಬಹುದು.

