ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಹಣಕ್ಕೂ ಕನ್ನ ಹಾಕಿದ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ! ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಸಮಾಜದ ಅತ್ಯಂತ ಕಟ್ಟಕಡೆಯ ವ್ಯಕ್ತಿಗಳಾದ ಭಿಕ್ಷುಕರ ಪುನರ್ವಸತಿಗಾಗಿ ಜನರಿಂದ ಸಂಗ್ರಹಿಸಿದ ‘ಭಿಕ್ಷುಕರ ಉಪಕರ‘ವನ್ನೂ ನುಂಗಿ ನೀರು ಕುಡಿಯುತ್ತಿರುವ ಈ ಕಾಂಗ್ರೆಸ್ ಸರ್ಕಾರದ ನಡೆ ಅತ್ಯಂತ ಅಮಾನವೀಯ ಮತ್ತು ನಾಚಿಕೆಗೇಡು ಎಂದು ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಬಡವರ ಹೆಸರಲ್ಲಿ ಅಧಿಕಾರಕ್ಕೆ ಬಂದು, ಈಗ ದೀನ-ದಲಿತರ ಹಸಿವು ನೀಗಿಸಬೇಕಾದ ಹಣವನ್ನೂ ಬಿಡದೆ ಲೂಟಿ ಮಾಡುತ್ತಿರುವುದು ಈ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದು ಟೀಕಾಪ್ರಹಾರ ಮಾಡಿದರು.
ಸಾವಿರಾರು ಕೋಟಿ ಬಾಕಿ:
ಬಿಬಿಎಂಪಿಯಿಂದ ಸಂಗ್ರಹವಾದ ಆರೋಗ್ಯ ಸೆಸ್ (₹256 ಕೋಟಿ), ಗ್ರಂಥಾಲಯ ಸೆಸ್ (218 ಕೋಟಿ) ಸೇರಿದಂತೆ ಸಾವಿರಾರು ಕೋಟಿ ರೂಪಾಯಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪಾವತಿಸದೆ ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ.
ಗ್ರಾಮ ಪಂಚಾಯತ್ ಹಣಕ್ಕೂ ಕನ್ನ:
2024-25ನೇ ಸಾಲಿನಲ್ಲಿ ಪಂಚಾಯತ್ಗಳು ಸಂಗ್ರಹಿಸಿದ 72.82 ಕೋಟಿಯಲ್ಲಿ ಕೇವಲ 21.55 ಕೋಟಿ ಮಾತ್ರ ಜಮೆಯಾಗಿದೆ. ಉಳಿದ 51 ಕೋಟಿ ಹಣ ಎಲ್ಲಿ ಹೋಯಿತು?
ಹೈಕೋರ್ಟ್ ತರಾಟೆ:
ರಾಜ್ಯದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿರುವ 720 ಮಕ್ಕಳನ್ನು ಗುರುತಿಸಲಾಗಿದ್ದರೂ ಅವರ ಪುನರ್ವಸತಿಗೆ ಈ ಸರ್ಕಾರಕ್ಕೆ ಪುರುಸೊತ್ತಿಲ್ಲ. ಹೈಕೋರ್ಟ್ ಚಾಟಿ ಬೀಸಿದ ಮೇಲೂ ಎಚ್ಚೆತ್ತುಕೊಂಡಿಲ್ಲ ಈ ಲಜ್ಜೆಗೆಟ್ಟ ಸರ್ಕಾರ,
ಅಕ್ರಮ ವರ್ಗಾವಣೆ:
ಭಿಕ್ಷುಕರ ಕಲ್ಯಾಣಕ್ಕೆ ಮೀಸಲಿಟ್ಟ ಶೇ.50 ರಷ್ಟು ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲು ಹೊಂಚು ಹಾಕುತ್ತಿರುವ ಇವರ ನೀಚ ಮನಸ್ಥಿತಿಗೆ ಕೊನೆಯೇ ಇಲ್ಲದಂತಾಗಿದೆ.
ಸಿಎಂ ಸಿದ್ದರಾಮಯ್ಯನವರೇ, “ಅಹಿಂದ” ಮತ್ತು “ಬಡವರ ಪರ” ಎಂದು ಬೊಬ್ಬೆ ಹೊಡೆಯುವ ನೀವು, ಭಿಕ್ಷುಕರ ಹೊಟ್ಟೆ ಮೇಲೆ ಹೊಡೆಯುವ ಈ ಪಾಪದ ಹಣದಲ್ಲಿ ಸರ್ಕಾರ ನಡೆಸುತ್ತಿದ್ದೀರಾ? ಜನರಿಂದ ಸಂಗ್ರಹಿಸಿದ ಪ್ರತಿಯೊಂದು ಪೈಸೆಗೂ ನೀವು ಲೆಕ್ಕ ನೀಡಲೇಬೇಕು ಎಂದು ಅಶೋಕ್ ಆಗ್ರಹ ಮಾಡಿದ್ದಾರೆ.
ಈ ಕೂಡಲೇ ಬಾಕಿ ಇರುವ ಎಲ್ಲಾ ಸೆಸ್ ಹಣವನ್ನು ಕೇಂದ್ರ ಪರಿಹಾರ ಸಮಿತಿಗೆ ಬಿಡುಗಡೆ ಮಾಡಬೇಕು ಮತ್ತು ಮಕ್ಕಳ ಪುನರ್ವಸತಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

