ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ರಲ್ಲಿ ದತ್ತವಾಗಿರುವ ಅಧಿಕಾರದ ಮೇರೆಗೆ ವಿವಿಧ ಕಾರಣಗಳಿಂದಾಗಿ ತೆರವಾಗಿರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ರಾಜ್ಯ ಚುನಾವಣಾ ಆಯೋಗವು ಉಪಚುನಾವಣೆ ಘೋಷಣೆ ಮಾಡಿದ್ದು, ವೇಳಾಪಟ್ಟಿಯನ್ನು ಪ್ರಕಟಿಸಿದೆ.
ರಾಜ್ಯದ 195 ತಾಲೂಕಿನ 531 ಗ್ರಾಮಪಂಚಾಯಿತಿಗಳ ಒಟ್ಟು 641 ಸ್ಥಾನಗಳಿಗೆ ಚುನಾವಣೆ ಪ್ರಕಟಿಸಲಾಗಿದೆ. ನವೆಂಬರ್ 6ರಂದು ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದ್ದು, ನವೆಂಬರ್ 12ರಂದು ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ.
ನವೆಂಬರ್ 13ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನವೆಂಬರ್ 15ರಂದು ನಾಮಪತ್ರಗಳ ವಾಪಸ್ ಪಡೆಯಲು ಕಡೆಯ ದಿನವಾಗಿದೆ. ನವೆಂಬರ್ 23ರಂದು ಚುನಾವಣೆ ನಡೆಯಲಿದ್ದು, ಮರು ಮತದಾನ ಅವಶ್ಯವಿದ್ದರೆ ನವೆಂಬರ್ 25 ರಂದು ಜರುಗಲಿದೆ.
ನವೆಂಬರ್ 26ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆ ನಡೆಯುವ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ 26 ರವರೆಗೆ ಚುನಾವಣಾ ನೀತಿ ಸಂಹಿತೆಯು ಜಾರಿಯಲ್ಲಿರುತ್ತದೆ ಎಂದು ಚುನಾವಣಾ ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.