ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜೀವನದಲ್ಲಿ ಸಂಕಷ್ಟಗಳನ್ನು ಎದುರಿಸಿ ಕುಟುಂಬವನ್ನು ಪೋಷಿಸಿ ಸಮಾಜದಲ್ಲಿ ಉತ್ತಮ ನೆಲೆ ದೊರಕಿಸಿಕೊಟ್ಟ ಹಿರಿಯರ ಕ್ಷೇಮದ ಜವಾಬ್ದಾರಿ ಯುವ ಜನತೆ ಮೇಲಿದೆ. ಇದನ್ನು ಆದ್ಯ ಕರ್ತವ್ಯ ಎಂದು ಭಾವಿಸಿ ಕುಟುಂಬದ ಸದಸ್ಯರೆಲ್ಲರೂ ಹಿರಿಯರನ್ನು ಗೌರವ ಆದರಗಳಿಂದ ಕಾಣಬೇಕು ಎಂದು ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್. ಶಿವಣ್ಣ ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ, ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ನಿವೃತ್ತ ನೌಕರರ ಸಂಘ ಮತ್ತು ಇತರೆ ಸ್ವಯಂ ಸೇವಾಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಮತ್ತು ಸುರಕ್ಷತೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಲವಾರು ಯೊಜನೆಗಳನ್ನು ಜಾರಿಗೆ ತಂದಿವೆ. 60 ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯ ವೇತನದಡಿ ರೂ.800, ಸಂಧ್ಯಾ ಸುರಕ್ಷಾ ಯೋಜನೆಯಡಿ ರೂ.1200, ಪ್ರತಿ ತಿಂಗಳು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಸರ್ಕಾರಿ ಬಸ್ ದರದಲ್ಲಿ ಶೇ.25 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಆರ್.ಶಿವಣ್ಣ ಹೇಳಿದರು.
60 ವರ್ಷದ ನಂತರ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿಯೊಬ್ಬರು ಗಮನಹರಿಸಬೇಕು. ಆರೋಗ್ಯವೇ ನಿಜವಾದ ಭಾಗ್ಯವಾಗಿದೆ. ಹಿರಿಯರು ಕುಟುಂಬದ ಇತರರೊಂದಿಗೆ ಹೊಂದಾಣಿಕೆಯಿಂದ ಇದ್ದು, ಪ್ರೀತಿ ಸ್ನೇಹದಿಂದ ವ್ಯವಹರಿಸಬೇಕು ಎಂದು ಆರ್.ಶಿವಣ್ಣ ಸಲಹೆ ನೀಡಿದರು.
ಉಪವಿಭಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿಯೂ ಬಾಲ್ಯ, ಯೌವ್ವನ ಹಾಗೂ ಮುಪ್ಪು ಸಹಜವಾದುದು. ಬಾಲ್ಯದಲ್ಲಿ ಮಕ್ಕಳು ಯಾರ ಮಾತೂ ಕೇಳದೆ ತಮಗೆ ತೋಚಿದ್ದನ್ನು ಮಾಡುತ್ತಾರೆ. ಇದೇ ರೀತಿ ಇಳಿ ವಯಸ್ಸಿನಲ್ಲೂ ಹಿರಿಯರು ಮಕ್ಕಳ ಹಾಗೆಯೇ ವರ್ತಿಸುತ್ತಾರೆ. ಮಕ್ಕಳನ್ನು ಜೋಪಾನ ಮಾಡುವ ರೀತಿಯಲ್ಲಿಯೇ ಹಿರಿಯರ ಕಾಳಜಿ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಸರ್ಕಾರ ಹಿರಿಯ ನಾಗರಿಕರಿಕರ ಕಲ್ಯಾಣ ಇಲಾಖೆಯಡಿ ಹಿರಿಯ ನಾಗರಿಕರ ಕ್ಷೇಮ, ಶ್ರೇಯೋಭಿವೃದ್ಧಿ ಹಾಗೂ ನೆಮ್ಮದಿ ಜೀವನಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಹಿರಿಯರ ಮೇಲಿನ ದಬ್ಬಾಳಿಕೆ, ದೌರ್ಜನ್ಯ, ವಂಚಿಸುವುದು, ಆಸ್ತಿ ಪಡೆದು ಮನೆಯಿಂದ ಹೊರ ಹಾಕುವುದು ಕಂಡುಬಂದರೆ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಹಿರಿಯ ನಾಗರಿಕರಿಗಾಗಿ ಶೇ.03 ರಷ್ಟು ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ಉಪವಿಭಾಧಿಕಾರಿ ಮೆಹಬೂಬ್ ಜಿಲಾನಿ ಖುರೆಷಿ ತಿಳಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಮಾತನಾಡಿ, ಹಿರಿಯ ನಾಗರಿಕರು, ದೌರ್ಜನ್ಯ ಹಾಗೂ ವಂಚನೆಗೆ ಒಳಗಾದಲ್ಲಿ ಹಿಂಜರಿಯದೇ ಪೊಲೀಸ್ ಠಾಣೆಯ ಮೆಟ್ಟಿಲೇರಬೇಕು. ಪೊಲೀಸ್ ಠಾಣೆ ಹಾಗೂ ನ್ಯಾಯಾಲಯಗಳು ದುರ್ಬಲರ ರಕ್ಷಣೆಗಾಗಿಯೇ ಕರ್ತವ್ಯ ನಿರ್ವಹಿಸುತ್ತವೆ. ಹಿರಿಯ ನಾಗರಿಕರು ತಮಗೆ ತೊಂದರೆಯಾದಲ್ಲಿ ಜಿಲ್ಲಾ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 9480803100 ಅಥವಾ 9480803102 ಕ್ಕೆ ಕರೆ ಮಾಡುವಂತೆ ತಿಳಿಸಿದರು.
‘ನಮ್ಮ ಯೋಗಕ್ಷೇಮ ಮತ್ತು ನಮ್ಮ ಹಕ್ಕುಗಳನ್ನು ಸ್ಥಳೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬಲ್ಲ ಸಶಕ್ತರು’ ನಾವು ಎಂಬ ಘೋಷವಾಕ್ಯದೊಂದಿಗೆ 2025ರ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಎಲ್ಲೆಡೆ ಹಮ್ಮಿಕೊಳ್ಳಲಾಗಿದೆ. ಇಲಾಖೆ ಸದಾ ಕಲಾ ಹಿರಿಯರ ಸೇವೆಗೆ ಬದ್ಧವಾಗಿದೆ ಎಂದು ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜೆ.ವೈಶಾಲಿ ಪ್ರಾಸ್ತಾವಿಕವಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ಕ್ರೀಡಾ ಸ್ಪರ್ಧೆಯಲಿ ವಿಜೇತರಾದವರಿಗೆ ಸನ್ಮಾನಿಸಿ ಪ್ರಶಸ್ತಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ರಮೇಶ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಡಿ.ಎನ್. ಮೈಲಾರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ವಿಜಯ್‍ಕುಮಾರ್, ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಬಿ.ಪಿ. ಪ್ರೇಮನಾಥ್, ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಆರ್. ರಂಗಪ್ಪ ರೆಡ್ಡಿ ಸೇರಿದಂತೆ ಮತ್ತಿತರರು ಇದ್ದರು.

