ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಜನ್ಮದಿನವಾದ ಏಪ್ರಿಲ್ 14ರಂದು ರಾಷ್ಟ್ರವ್ಯಾಪಿ ಕೇಂದ್ರ ಸರಕಾರಿ ಕಚೇರಿಗಳಿಗೆ ರಜಾದಿನವಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವುದು ಅತ್ಯಂತ ಸಂತೋಷದ ಸಂಗತಿ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಐತಿಹಾಸಿಕವಾಗಿ ಅನ್ಯಾಯಕ್ಕೆ ತುತ್ತಾಗಿದ್ದ ಮಹಾನ್ ಮಾನವತಾವಾದಿ ಅಂಬೇಡ್ಕರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅರ್ಹ ಗೌರವ, ಸಮ್ಮಾನ ಸಮರ್ಪಣೆ ಮಾಡಿದೆ. ಮನುಕುಲಕ್ಕೆ, ಚೈತನ್ಯಶೀಲ ಭಾರತಕ್ಕೆ ಅಂಬೇಡ್ಕರ್ ಅವರು ನೀಡಿರುವ ಕೊಡುಗೆ ಅಜರಾಮರ. ಪ್ರಧಾನಿಗಳ ಈ ನಿರ್ಧಾರವನ್ನು ನಾನು ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಬಾಬಾ ಸಾಹೇಬ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ದೃಷ್ಟಿಕೋನವು ಭಾರತವನ್ನು ಸದಾ ಗಟ್ಟಿಗೊಳಿಸುತ್ತಲೇ ಇದೆ ಎಂದು ಅವರು ಹೇಳಿದ್ದಾರೆ.