ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಕಸಿತ ಭಾರತದ ದೃಢ ಸಂಕಲ್ಪದೊಂದಿಗೆ ಮಂಡನೆಯಾಗಿರುವ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ 63,049 ಕೋಟಿ ರೂ.ಗಳ ದಾಖಲೆ ಅನುದಾನ, ಜೊತೆಗೆ ಸಹಾಯಧನ ಅನುದಾನದಲ್ಲಿ 16 ಸಾವಿರ ಕೋಟಿ ರೂ. ಹಾಗೂ ರಾಜ್ಯದ ರೈಲ್ವೆ ಯೋಜನೆಗಳಿಗಾಗಿ 7,748 ಕೋಟಿ ರೂ. ಅನುದಾನ ನಿಗದಿಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದರು.
ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯಕ್ಕೆ 3.89 ಲಕ್ಷ ಕೋಟಿ ರೂ. ತೆರಿಗೆ ಹಂಚಿಕೆ ಮಾಡಿದೆ. ಜತೆಗೆ, 2.36 ಲಕ್ಷ ಕೋಟಿ ರೂ. ಸಹಾಯಧನ ಅನುದಾನ ನೀಡಿದೆ. ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ನೀಡುವ ವಿಶೇಷ ನೆರವಿನಡಿ 2020-21 ರಿಂದ 2026ರ ಜನವರಿವರೆಗೆ ಕೇಂದ್ರದಿಂದ ರಾಜ್ಯಕ್ಕೆ ಒಟ್ಟಾರೆ 15,945 ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಒಟ್ಟಾರೆ ರಾಜ್ಯಕ್ಕೆ ಬಜೆಟ್ ಘೋಷಣೆಗಳನ್ನು ಇಡೀ ರಾಜ್ಯ ಸ್ವಾಗತಿಸುತ್ತಿದೆ.
ಬೆಂಗಳೂರನ್ನು ಹೈದರಾಬಾದ್ ಮತ್ತು ಚೆನ್ನೈಗೆ ಸಂಪರ್ಕಿಸುವ ಹೈ-ಸ್ಪೀಡ್ ರೈಲು ಕಾರಿಡಾರ್‌ಗಳು ರಾಜ್ಯದ ಅಭಿವೃದ್ಧಿಗೆ ಹೊಸ ವೇಗ ನೀಡಲಿವೆ. ಈ ಬಾರಿಯ ಬಜೆಟ್ ನಲ್ಲಿ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಲಾಗಿದೆ. ಕರ್ನಾಟಕದ ಪ್ರಗತಿಗೆ ಪೂರಕವಾದ ದೂರದರ್ಶಿತ್ವದ ಬಜೆಟ್ ನೀಡಿರುವ ಆದರಣೀಯ ಪ್ರಧಾನಿ ನರೇಂದ್ರ ಮೋದಿ ರವರಿಗೆ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಅವರು ಸಲ್ಲಿಸಿದರು.
ಕೇಂದ್ರದ ನಮ್ಮ NDA ಸರ್ಕಾರ ರಾಜ್ಯದ ಮೂಲಸೌಕರ್ಯ ಮತ್ತು ಆರ್ಥಿಕ ಸಬಲೀಕರಣಕ್ಕೆ ಪೂರ್ಣ ಸಹಕಾರ ನೀಡುತ್ತಿದೆ. ಎಲ್ಲ ನಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳು ಕಾಲಮಿತಿಯಲ್ಲಿ ಸಾಕಾರಗೊಳ್ಳಲು ರಾಜ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇನ್ನು ಮೇಲಾದರೂ ತನ್ನ ಕೀಳು ರಾಜಕೀಯ ಹಿತಾಸಕ್ತಿ ಬದಿಗಿಟ್ಟು, ತನ್ನ ಪಾಲಿನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕೆಂದು ಆಗ್ರಹಿಸುತ್ತೇನೆ. ತನ್ನ ಸಂಕುಚಿತ ರಾಜಕೀಯ ಮನೋಭಾವದಿಂದ ಅಭಿವೃದ್ಧಿ ಕಾರ್ಯಗಳಲ್ಲಿ ಅಡೆತಡೆಗಳನ್ನು ಉಂಟುಮಾಡದೆ, ಕೇಂದ್ರದೊಂದಿಗೆ ಸಮನ್ವಯ ಸಾಧಿಸಲಿ. ರಾಜ್ಯದ ಸಮಗ್ರ ಹಿತಾಸಕ್ತಿಗೆ ಪೂರಕವಾಗಿ ಕೆಲಸ ಮಾಡಲಿ ಎನ್ನುವುದು ರಾಜ್ಯದ ಜನರ ನಿರೀಕ್ಷೆಯಾಗಿದೆ ಎಂದು ವಿಜಯೇಂದ್ರ ಹೇಳಿದರು.

