ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹೈಕಮಾಂಡ್ ಗೆ ಬಿಟ್ಟಿದ್ದು, ನಿಗಮ ಮಂಡಳಿಗೆ ಸಿಎಂ ನೇಮಕ ಮಾಡುತ್ತಾರೆ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕೆಂದು ‌ಹೈಕಮಾಂಡ್ ನಿರ್ಧರಿಸಲಿದೆ
ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನ ನಮ್ಮ ಹಂತದಲ್ಲಿ ತೀರ್ಮಾನ ಆಗುವ ವಿಷಯವಲ್ಲ. ಈಗಿರುವವರನ್ನೇ ಮುಂದುವರಿಸಬೇಕಾ? ಅಥವಾ ಹೊಸಬರಿಗೆ ಅವಕಾಶ ನೀಡಬೇಕಾ ಎಂಬುದು ಪಕ್ಷದ ಹಂತದಲ್ಲಿ ಚರ್ಚೆ ಆಗಬೇಕು.‌ ಇದು ನಮ್ಮ ಹಂತದಲ್ಲಿ ಆಗುವಂತದ್ದಲ್ಲ. ಒಬ್ಬೊಬ್ಬರು ಎರಡೂ ಹುದ್ದೆಯಲ್ಲಿದ್ದರೆ ಜವಾಬ್ದಾರಿ ನಿರ್ವಹಿಸುವುದು ಕಷ್ಟ ಆಗುತ್ತದೆ. ಹಾಗಾಗಿ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವ ನಿರ್ಧಾರ ಎಐಸಿಸಿಗೆ ಮಾತ್ರ ಇದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಪಕ್ಷದ ಕೆಲಸಕ್ಕೆ ಯಾರು ಹೆಚ್ಚು ಸಮಯ ಕೊಡುತ್ತಾರೋ ಅಂತಹ ಒಬ್ಬರ ಹೆಸರನ್ನು ಚರ್ಚಿಸಿ ಬೆಳಗಾವಿ ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಹೆಸರು ಸೂಚಿಸಿದ್ದೇವೆ.‌ ಎರಡು ಹೆಸರು ಕೊಟ್ಟಿಲ್ಲ. ಒಬ್ಬರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇವೆ. ಬೆಳಗಾವಿ ಮತ್ತು ಚಿಕ್ಕೋಡಿ ಎರಡೂ ಅಧ್ಯಕ್ಷರು ಈಗಾಗಲೇ ಒಂದು ಹುದ್ದೆಯಲ್ಲಿದ್ದಾರೆ. ಹಾಗಾಗಿ, ಎರಡೂ ಬದಲಾವಣೆ ಮಾಡುತ್ತೇವೆ ಎಂದು ಸತೀಶ ಜಾರಕಿಹೊಳಿ ತಿಳಿಸಿದರು.

ಬೆಳಗಾವಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮೃಣಾಲ್ ಹೆಬ್ಬಾಳ್ಕರ್ ಹೆಸರು ಕೇಳಿ ಬಂದಿರುವ ಕುರಿತ ಮಾಧ್ಯಮವರು ಕೇಳಿದ ಪ್ರಶ್ನೆಗೆ,  ಒಂದೇ ಹೆಸರು ಮಾತ್ರ ಕೊಟ್ಟಿದ್ದೇವೆ‌. ಪಕ್ಷ ಸಂಘಟನೆಗೆ ಹೆಚ್ಚು ಸಮಯ ನೀಡಬೇಕು‌. ಅಧ್ಯಕ್ಷರಾದವರು ಕಾಂಗ್ರೆಸ್ ಕಚೇರಿಯಲ್ಲಿ ಹೆಚ್ಚು ಇರಬೇಕು. ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಹೊಂದಿರಬೇಕು. ಇದೇ ಮಾನದಂಡವಾಗಿದೆ. ಹಾಗಾಗಿ, ಸಾಮಾನ್ಯ ಕಾರ್ಯಕರ್ತರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಡಿಸಲು ಪ್ರಯತ್ನಿಸುತ್ತೇವೆ ಎಂದು ಅವರು ತಿಳಿಸಿದರು.

ನಿಗಮ ಮಂಡಳಿಗಳ ಅಧ್ಯಕ್ಷರನ್ನು ನೇಮಕ ಮಾಡುವ ಅಧಿಕಾರ ಮುಖ್ಯಮಂತ್ರಿಗಳಿಗಿದೆ. ಈಗಾಗಲೇ ಶೇ. 70ರಷ್ಟು ನೇಮಕ ಮಾಡಲಾಗಿದ್ದು ಉಳಿದ ಶೇ. 30ರಷ್ಟು ನಿಗಮ ಮಂಡಳಿಗಳಿಗೆ ನೇಮಕ ಆಗಬೇಕಿದೆ. ನಮಗೆ ನಿರ್ದೇಶಕರು, ಸದಸ್ಯರನ್ನು ಮಾಡುವ ಜವಾಬ್ದಾರಿ ಮಾತ್ರವಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್​ ನೇತೃತ್ವದಲ್ಲಿ ಕಮಿಟಿ ಇದೆ. ಹಂತ – ಹಂತವಾಗಿ ನೇಮಕ ಮಾಡಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಬಜೆಟ್​​ನಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ಮಾಡುವ ವಿಷಯ ಇಲ್ಲ. ಹೊಸ ಜಿಲ್ಲೆಯಾಗಬೇಕು ಎಂಬ ಆಶಯ ಇದೆ. ಇವತ್ತೇ ಆಗುತ್ತೆ ಅಂತಾ ಹೇಳಲು ಆಗುವುದಿಲ್ಲ. ಯಾಕೆಂದರೆ ದೊಡ್ಡ ಜಿಲ್ಲೆ ಇದೆ. ಜಿಲ್ಲಾ ವಿಭಜನೆಯಾದರೆ ಒಳ್ಳೆಯದಾಗುತ್ತದೆ. ಆದರೆ, ಅದಕ್ಕೆ ಎಲ್ಲ ರೀತಿಯಿಂದ ಒಮ್ಮತ ಬರಬೇಕು ಅಷ್ಟೇ ಎಂದು ಸತೀಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಬಿಜೆಪಿ ಆರೋಪಕ್ಕೆ, ಅದನ್ನು ಬಿಟ್ಟು ಮತ್ತೇನು ಹೇಳುತ್ತಾರೆ ಅವರು? ಅವರಿಗೆ ಮಾಡಲು ಸಾಕಷ್ಟು ಕೆಲಸವಿದೆ. ಅದನ್ನು ಬಿಟ್ಟು ಅನಾವಶ್ಯಕವಾಗಿ ಗೊಂದಲ ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಸರ್ಕಾರ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಬಿಜೆಪಿ‌ ವಿಧಾನ ಪರಿಷತ್ ಸದಸ್ಯರು ಸಭಾಪತಿಗಳಿಗೆ ದೂರು ನೀಡಿರು ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿ.ಟಿ.ರವಿ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ತನಿಖೆ ಮಾಡಲು ಯಾವುದೇ ತೊಂದರೆ ಇಲ್ಲ. ಜಿಲ್ಲೆಯಲ್ಲಿ ಸದ್ಯ ಇರುವ ಯಾವ ಅಧಿಕಾರಿಯ ವರ್ಗಾವಣೆ ಇಲ್ಲ. ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸತೀಶ ಜಾರಕಿಹೊಳಿ ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರ ಕೆಲಸ ಮಾಡುತ್ತಿದೆ. ಸರ್ಕಾರದ ಮೇಲೆ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮುಂದಿನ ಮೂರು ಬಜೆಟ್ ಮಂಡನೆ ಮಾಡಿ ಜನಪರ ಕೆಲಸ ಮಾಡುತ್ತೇವೆ. ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಯಾಗಿದೆ. ಅದಕ್ಕೆ ಬರುವ ಬಜೆಟ್​​ನಲ್ಲಿ ಅನುದಾನ ಮೀಸಲಿಡುತ್ತೇವೆ ಎಂದು ಜಾರಕಿಹೊಳಿ ಹೇಳಿದರು.

 

- Advertisement -  - Advertisement - 
Share This Article
error: Content is protected !!
";