ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನದ ಡಿಕೆ ಶಿವಕುಮಾರ್ ಪೈಪೋಟಿ ಕುರಿತು ಪ್ರತಿಕ್ರಿಯಿಸಿ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸೋಮವಾರ ಮಾತನಾಡಿದ ಅವರು, ನಾಲ್ಕು ಜನ ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ಸ್ಥಾನ ನಿರ್ಧಾರ ಆಗುವುದಿಲ್ಲ. ಹೈಕಮಾಂಡ್ ಸಂಪೂರ್ಣವಾಗಿ ವಿಶ್ಲೇಷಣೆ ಮಾಡಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಗೃಹ ಸಚಿವರು ತಿಳಿಸಿದರು.
ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಚುನಾವಣೆ ಮುಗಿದ ಮೇಲೆ ಹೈಕಮಾಂಡ್ ಸೂಕ್ತ ನಿರ್ಧಾರ ಪ್ರಕಟವಾಗಬಹುದು ಎಂದು ಪರಮೇಶ್ವರ್ ಅವರು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಬ್ಬ ಸಮರ್ಥ ನಾಯಕರಿದ್ದು ಪಕ್ಷದ ಅಧ್ಯಕ್ಷರಾಗಿದ್ದಾರೆ. ಶಿವಕುಮಾರ್ ಅವರ ಸಾಮರ್ಥ್ಯಕ್ಕೆ ಯಾರೂ ಹೋಲಿಕೆ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಶ್ಲಾಘಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನವೆಂಬರ್ 11ರಂದು ರಾಹುಲ್ ಗಾಂಧಿ ಭೇಟಿಗೆ ಸಮಯ ಕೇಳಿ ದೆಹಲಿಗೆ ತೆರಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನವೆಂಬರ್ 15ರಂದು ದೆಹಲಿಗೆ ಭೇಟಿ ನೀಡಲಿದ್ದಾರೆ.
ಡಾ.ಜಿ ಪರಮೇಶ್ವರ್ ಈ ಕುರಿತು ಪ್ರತಿಕ್ರಿಯಿಸಿ, ನಾಯಕತ್ವ ಬದಲಾವಣೆ ಅಥವಾ ಸಂಪುಟ ಪುನಾರಚನೆಯ ಅಗತ್ಯವಿದ್ದರೆ ಬಿಹಾರ ಚುನಾವಣೆಯ ಬಳಿಕ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡಲಿದೆ. ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಸಿಎಂ ಬದಲಾವಣೆ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್. ನಾವು ಇಲ್ಲಿ ಕುಳಿತುಕೊಂಡು ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಅವಶ್ಯಕತೆ ಇದ್ದರೆ ಬಿಹಾರ ಚುನಾವಣೆ ನಂತರ ಹೈಕಮಾಂಡ್ನವರೇ ತೀರ್ಮಾನ ಮಾಡುತ್ತಾರೆ. ಪುನಾರಚನೆಯೋ?, ಎರಡೂವರೆ ವರ್ಷದ ನಂತರ ಅಧಿಕಾರ ಬದಲಾವಣೆಯೋ?,
ಏನೇ ಇದ್ರೂ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾವು ಮಾತಾಡೋದರಿಂದ ಗೊಂದಲ ಆಗುತ್ತೆ. ಆಡಳಿತಕ್ಕೆ ಚುರುಕು ಕೊಡುವ ಕೆಲಸ ಆಗಬೇಕಾಗಿದೆ. ಸಂಪುಟ ಪುನಾರಚನೆ ಬಗ್ಗೆ ನನಗೆ ಯಾರೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಶಿವಕುಮಾರ್ ಅವರಿಗೆ ಹೋಲಿಕೆ ಮಾಡುವ ನಾಯಕರು ಈಗ ಯಾರಿದ್ದಾರೆ?.
ಡಿ.ಕೆ.ಶಿವಕುಮಾರ್ ಅವರ ಬಗ್ಗೆ ಹೇಳೋದಕ್ಕೆ ನಮಗೆ ಸಾಮರ್ಥ್ಯ ಇಲ್ಲ. ಅವರು ನಮ್ಮ ನಾಯಕರು. ನಮ್ಮ ಅಧ್ಯಕ್ಷರು ಮತ್ತು ಸಮರ್ಥರಿದ್ದಾರೆ. ಅವರಿಗೆ ಅಷ್ಟೊಂದು ಸಾಮರ್ಥ್ಯ ಇದೆ. ಅವರು ಸಿಎಂ ಆಗುವ ಬಗ್ಗೆ ನಾವು ಹೇಳುವುದಕ್ಕಾಗುವುದಿಲ್ಲ. ಹೈಕಮಾಂಡ್ ತೀರ್ಮಾನ ಅಂತಿಮ ಆದಾಗ ನಾವು ಅದಕ್ಕೆ ಬದ್ಧರಾಗಿರುತ್ತೇವೆ ಎಂದು ಸೂಚ್ಯವಾಗಿ ಹೇಳಿದರು.
ನವೆಂಬರ್ ಕ್ರಾಂತಿ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಹೈಕಮಾಂಡ್ನವರು ಏನು ತೀರ್ಮಾನ ಮಾಡುತ್ತಾರೋ ತಿಳಿದಿಲ್ಲ. ಹೈಕಮಾಂಡ್ನವರು ಈ ಬಗ್ಗೆ ಏನೂ ಹೇಳಿಲ್ಲ. ದೆಹಲಿಯವರು ಏನಾದ್ರೂ ಹೇಳಿದ್ರೆ ನಾವು ಹೇಳಬಹುದು ಎಂದು ತಿಳಿಸಿದರು.
ಅಕ್ಟೋಬರ್ 31ರೊಳಗೆ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಕೊಡುವುದಾಗಿ ಎಸ್ಐಟಿ ಹೇಳಿದೆ. ಒಂದೆರಡು ದಿನ ಆಚೆ ಈಚೆ ಆಗಬಹುದು.ಎಲ್ಲವನ್ನೂ ಸೇರಿಸಿ ಸಮಗ್ರ ತನಿಖಾ ವರದಿ ಕೊಡಲು ಹೇಳಿದ್ದೇವೆ. ಅವರೇ ಹೇಳಿದ ಹಾಗೆ ಅಕ್ಟೋಬರ್ನಲ್ಲಿ ತನಿಖೆ ಮುಗಿಯಲಿದೆ. ಕೆಮಿಕಲ್ ಅನಾಲಿಸಿಸ್ ಮಾಡಿ ವರದಿ ಕೊಡೋದಾಗಿ ಹೇಳಿದ್ದಾರೆ. ಯಾವ ರೀತಿ ವರದಿ ಕೊಡ್ತಾರೆ ನೋಡಬೇಕು?. ಮಧ್ಯಂತರ ವರದಿ ಕೊಡ್ತಾರೋ?, ಪೂರ್ಣ ವರದಿ ಕೊಡ್ತಾರೋ ನೋಡಬೇಕು ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು.

