ಬಡವರ ಮಕ್ಕಳು ಎಂದರೆ ಯಾಕಿಷ್ಟು ತಾತ್ಸಾರ? ಸಿದ್ದರಾಮಯ್ಯನವರೇ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಾರಕ್ಕೆ 6 ದಿನ ಮಕ್ಕಳಿಗೆ ಮೊಟ್ಟೆ ವಿತರಿಸಲು ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ವತಿಯಿಂದ 1,500 ಕೋಟಿ ರೂಪಾಯಿ ದೇಣಿಗೆ ನೀಡಿದ್ದರೂ ಸಹ ರಾಜ್ಯ ಸರ್ಕಾರ ಮೊಟ್ಟೆ ವಿತರಿಸದೆ ಕೇವಲ ಬಾಳೆ ಹಣ್ಣು ವಿತರಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಬೇಸರ ವ್ಯಕ್ತ ಪಡಿಸಿದ್ದಾರೆ.

ಅವರು ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತೆ ಈ ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಸರ್ಕಾರದ ಅನುದಾನದಿಂದ ಮಕ್ಕಳಿಗೆ ಪೌಷ್ಠಿಕ ಆಹಾರ ಕೊಡುವುದಿರಲಿ, ಕನಿಷ್ಠ ಪಕ್ಷ ದಾನಿಗಳು ಕೊಟ್ಟಿರುವ ಹಣವನ್ನೂ ಸರಿಯಾಗಿ ವಿನಿಯೋಗಿಸುವ ಯೋಗ್ಯತೆ ಇಲ್ಲ ಎಂದು ಅವರು ವಾಗ್ದಾಳಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರೇ, ಬಡವರ ಮಕ್ಕಳು ಎಂದರೆ ನಿಮಗೆ ಯಾಕಿಷ್ಟು ತಾತ್ಸಾರ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.

ಲೂಟಿ ಕಾಂಗ್ರೆಸ್-
ಪ್ರತಿಷ್ಠಿತ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿನಿತ್ಯವೂ ಪೌಷ್ಠಿಕವಾದ ಮೊಟ್ಟೆ ಸೇವಿಸಲಿ ಎಂಬ ಆರೋಗ್ಯ ವೃದ್ಧಿಯ ಕಾಳಜಿ ಮೆರೆದು ವಾರದ 6 ದಿನಗಳೂ ಸರ್ಕಾರ ಮೊಟ್ಟೆ ವಿತರಿಸಲಿ ಎಂದು ₹1500 ಕೋಟಿ ರೂಗಳನ್ನು ನೀಡಿದೆ.

ಹಣ ಪಡೆದ ರಾಜ್ಯದ ಕಾಂಗ್ರೆಸ್ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಿ ಪ್ರೇಮ್ ಜಿ ಪ್ರತಿಷ್ಠಾನದ ಸೇವಾ ಕಾರ್ಯಕ್ಕೆ ಬೆಂಬಲವಾಗಿ ನಿಲ್ಲುವುದರ ಬದಲು ತಾತ್ಸಾರ ಧೋರಣೆ ಅನುಸರಿಸಿರುವುದು ಸರ್ಕಾರದ ಸಹಭಾಗಿತ್ವದಲ್ಲಿ ಸಮಾಜಕ್ಕೆ ಕೊಡುಗೆ ನೀಡಲು ಮುಂದೆ

ಬರುವ ಸಂಘ-ಸಂಸ್ಥೆಗಳು ಸರ್ಕಾರವನ್ನೇ ನಂಬದೆ ಅನುಮಾನಿಸುವ ಸ್ಥಿತಿ ನಿರ್ಮಿಸಲು ಹೊರಟಿರುವುದು ನಾಡಿನ ದೌರ್ಭಾಗ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

- Advertisement -  - Advertisement -  - Advertisement - 
Share This Article
error: Content is protected !!
";